Wednesday, 30 November 2011

anudinaabhavaabdhiyalli....21

ಎಲ್ಲ ಮತ,ಪಂಥಗಳಲ್ಲಿಯೂ ನಾವು ಈ ಬಗೆಯ ಎರಡು ತರಹದ ಸಾಧಕರನ್ನು ಕಾಣುತ್ತೇವೆ.ಆದರೆ ಎಲ್ಲ ಕಡೆಗೂ ಸಾರ್ವಜನಿಕ ಪ್ರಚಾರಕ್ಕೆ  ಬಾರದೆ ತಮ್ಮದೇ ಆದ ಅಂತರಂಗದ ಜಗತ್ತಿನಲ್ಲಿಯೇ ಧನ್ಯತೆಯನ್ನು ಕಂಡವರು ಅಲ್ಪಸಂಖ್ಯಾಕರೆ ಆಗಿದ್ದಾರೆ .ಒಂದು ಗುಂಪು ಕಟ್ಟಿಕೊಂಡು ,ತನ್ಮೂಲಕ ತಮ್ಮ ಮತದ ಪ್ರಸಾರಕ್ಕೆ ಒಂದು ಸಮೂಹವನ್ನು ನೆಚ್ಚುವದು ಬಹಳ ಜನ ಸಾಧಕರ ಅನಿವಾರ್ಯ ಕ್ರಿಯೆಯೇ ಆಗಿದೆ.ಇದರ ಹಿಂದೆ ಎಷ್ಟೇ  ಒಳ್ಳೆಯ ಉದ್ದೇಶವಿದ್ದರೂ ಕಾಲದ ಒಟ್ಟೂ ನಡಿಗೆಯಲ್ಲಿ ಈ ಪ್ರಕ್ರಿಯೆ ಹಲವು
ಸಮಷ್ಯೆಗಳನ್ನು ಸ್ರಷ್ಟಿಸಿದ್ದು ಸ್ಪಷ್ಟವಾಗಿಯೇ ಇದೆ.

ಮಾಧ್ವ ಪರಂಪರೆಯಲ್ಲೂ ಈ ಬಗೆಯ ಬಿಡಿ ಸನ್ಯಾಸಿಗಳು,ತಪೋ ನಿರತರು ಹಲವರಿದ್ದಾರೆ.ಇವರ ಬಗೆಗೆ ಪೀಠವೇರಿದ ಯತಿಗಳ ಬಗೆಗೆ ಬಂದಂತೆ ಯಾವುದೇ ''ವಿಜಯ-ಕಾವ್ಯ''ವು ಬಂದಿಲ್ಲ ವೆನ್ನುವದು ನಮಗೆ ಈ ಇಡಿ ಚಾರಿತ್ರಿಕ ಸತ್ಯದ ಬಗೆಗೆ ಮತ್ತೆ ಬೇರೆ ಕೆಲವು ವಿಷಯಗಳನ್ನು ತಿಳಿಸುತ್ತಿರುವಂತೆ ಕಾಣುತ್ತದೆ.
ಚರಿತ್ರೆಯಲ್ಲಿ ತಾನು ,ತನ್ನ ಧರ್ಮ ಸ್ಥಾಪಿತ ವಾಗಬೇಕೆಂಬ ಆಲೋಚನೆ ಇಲ್ಲದೆ ಶುದ್ಧಾನ್ಗವಾಗಿ ಒಬ್ಬ ವ್ಯಕ್ತಿ ಸಮೂಹದಲ್ಲಿ ನೇತಾರನಾಗಿ ನಿಲ್ಲುವ ಯೋಚನೆ ಮಾಡಿದ್ದನೆಮ್ಬುದೆ ನಂಬಲು ಬಹಳ ಕಷ್ಟದ ವಿಷಯ.

Sunday, 27 November 2011

anudinaabhavaabdhiyalli....21

ಇದಕ್ಕೂ ಒಂದು ಉತ್ತರವನ್ನು ನಮ್ಮ ಹಿರಿಯರು ಕೊಡುತ್ತ ಬಂದಿದ್ದಾರೆ.ಒಬ್ಬ ವ್ಯಕ್ತಿ ತನ್ನ ಮಟ್ಟಿಗೆ ತಾನು ಮುಕ್ತಿ,ಮೊಕ್ಷ,ನಿರ್ವಾಣ,ಕೈವಲ್ಯ,ಏನೋ ಒಂದನ್ನು ಪಡೆದುಕೊಂಡ ಮೇಲೆ ಅವನಿಗೆ  ಲೋಕದ ಅನಂತ ದುಖಿಗಳ ಬಗೆಗೆ ಅನುಕಂಪ ಉಂಟಾಗಿ ಆತ ತನ್ನ ಪ್ರವಾಸ ಕಥನವನ್ನು ಇನ್ನೊಬ್ಬನಿಗು ತಿಳಿಸಲು ಯೋಚಿಸಿ ಕಾರ್ಯ ಪ್ರವ್ರತ್ತನಾಗುತ್ತಾನಂತೆ.ಆತನ ಪ್ರವಚನಗಳು,ಗ್ರಂಥಗಳು,ಎಲ್ಲವೂ ಇದೆ ಉದ್ದೇಶದ  ಸಂಕೇತಗಳು.ಹಾಗಾದರೆ ಆತ ಒಬ್ಬನೇ ತನ್ನದೇನು ಹೇಳುವದಿದೆಯೋ ಅದನ್ನು ಹೇಳಿ ಹೋಗಬಾರದೇಕೆ ಎಂಬ ಪ್ರಶ್ನೆಯೂ ಇದ್ದೆ ಇದೆ.
ನಮ್ಮ ಚರಿತ್ರೆ ತಿಳಿಸುವಂತೆ ಪ್ರತಿಯೊಬ್ಬ ಮೂಲ ಚಿಂತಕನೂ ಮೂಲದಲ್ಲಿ ಒಂಟಿಯಾಗಿಯೇ ಸಾಧಕನಾಗಿದ್ದ.ಆದರೆ ಮುಂದೆ ಬಂದ ಅವನ ಹಿಂಬಾಲಕರು ಗುಂಪು ಕಟ್ಟಿಕೊಂಡರು.ಈ ಗುಂಪು ಮೂಲಶಕ್ತಿಯನ್ನು ಅನೇಕ ಕಾರಣಗಳಿಗಾಗಿ ಕಳೆದುಕೊಳ್ಳುತ್ತದೆ.ಈ ಬಗೆಯ ಶಕ್ತಿ-ಸ್ರಾವವೂ ಕಾಲದ ಅನಿವಾರ್ಯ ಪರಿನಾಮವೆಂದೆ ಭಾವಿಸುವ ಒಂದು ವರ್ಗವೂ ನಿರಂತರವಾಗಿ ಈ ಅವಸರ್ಪಿನಿ ಪ್ರಕ್ರಿಯೆಗೆ ಪೂರಕವಾಗಿಯೆ ಕೆಲಸ ಮಾಡುತ್ತಿರುತ್ತದೆ.
ಇದರ ಇನ್ನೊಂದು ಪರಿಣಾಮದ ಬಗೆಗೂ ನಾವು ಇಲ್ಲಿಯೇ ಗಮನಿಸಬಹುದು.ತನ್ನ ಪಾಡಿಗೆ ತಾನು ಮುಕ್ತಿಯನ್ನು ಪಡೆದವನಕಿಂತ ಜಗತ್ತಿನ ಜೀವಗಳಿಗೂ ತನ್ನ ಆಲೋಚನೆಗಳನ್ನು ಬಿತ್ತುಕೊತ್ತವ ಬಹಳ ದೊಡ್ದವನೆಂಬ ಸುದ್ದಿಯೂ ತತ್ವಜ್ಞಾನದಲ್ಲಿ ಬಹಳ ಪ್ರಚಾರ ಪಡೆಯುತ್ತಾ ಬಂದಿದೆ.ಇದು ಹೊರಗೆ ನೋಡಲು ಬಹಳ ಸಹಜವಾಗಿಯೇ ಕಾಣುವ ಮಾತು.
ಆದರೆ ಇದರ ಹಿಂದೆ ಒಂದು ಅಗೋಚರ ಮನೋವೈಜ್ಞಾನಿಕ ಕಾರಣವೂ ಇರಬಹುದಾಗಿದೆ.

Saturday, 26 November 2011

anudinaabhavaabdhiyalli....20

ಈ ಸಂದರ್ಭದ ಒಟ್ಟು ಮುಖ್ಯ ಬಿಂದು ಇರುವದು ನಮ್ಮ ಹೊರ-ಒಳಗಿನ ಅಸ್ತಿತ್ವಗಳ ಅವಶ್ಯಕತೆಗಳನ್ನು ಪುರೈಸಿಕೊಳ್ಳುವಲ್ಲಿ ನಾವು
ತೆಗೆದುಕೊಳ್ಳುವ ತಿರ್ಮಾನಗಳಲ್ಲಿ ಇದೆ.ಅಂದರೆ ಬರಿ ಹೊರಗನ್ನು ಲಕ್ಷಿಸುವದು ಅಥವಾ ಬರಿ ಒಳಗನ್ನು ಲಕ್ಷಿಸುವದು ಈ ಎರಡು ಅಪಾಯಗಳಿಂದ ನಾವು ಪಾರಾದಾಗಲೇ ಈ ಬಗೆಗೆ ನಾವು ಒಂದು ಸಾವಧಾನಿಕ ನಿಲುವನ್ನು ತೆಗೆದುಕೊಳ್ಳುವದು ಸಾಧ್ಯವಿದೆ.
ಆದರೆ ತತ್ವಜ್ಞಾನದ ಚರಿತ್ರೆ ಈ ಬಗೆಯ ಸಮಚಿತ್ತದ ಆವಿಷ್ಕಾರವು ಎಷ್ಟು ಕಷ್ಟ ಎಂಬುದನ್ನೇ ಮತ್ತೆ ಮತ್ತೆ ಒತ್ತಿ ಹೇಳುವಂತಿದೆ.ಇಷ್ಟೇ ಏಕೆ ಇಂತಹ ಆರೋಗ್ಯಪೂರ್ಣ ಚಿಂತನೆಯ ಅಲಭ್ಯತಇನ್ದಾಗಿಯೇ ಜಗತ್ತಿನಲ್ಲಿ ನಡೆದ ಹಿಂಸಾತ್ಮಕ ಸಂಘರ್ಷಗಳ ಒಂದು ದೊಡ್ಡ
ಚಿತ್ರಪ್ರದರ್ಷನವನ್ನೇ ನಾವು ಯಾವುದೇ ದೇಶದ ಚರಿತ್ರೆಯಲ್ಲೂ ಧ್ಹಾಲವಾಗಿ ಗಮನಿಸಬಹುದು.
ಇದಕ್ಕೊಂದು ಕಾರಣ ಮಿಮಾನ್ಶೆಯನ್ನೂ ಕೆಲವ ಪಂಥಗಳು ಕೊಡುತ್ತವೆ.ಅವು ಹೇಳುವದೆನೆಂದರೆ ಧರ್ಮವು ವ್ಯಕ್ತಿಗತ ಅನುಭವದ
ಸ್ವರೂಪದಲ್ಲಿ ಶುದ್ಧವಾಗಿಯೇ ಇರುತ್ತದೆ ಆದರೆ ಅದು ಸಾಂಸ್ಥಿಕ ರೂಪ ತೂಟ್ಟಾಗ ಅದರ ಮೂಲಶುದ್ಧಿಯು ನಾಶವಾಗುತ್ತದೆ .ಹಾಗಾದರೆ ಧರ್ಮವು ಸಾಂಸ್ಥಿಕ ರುಪವನ್ನಾದರು ಏಕೆ ತೊಡಬೇಕು?ಎಂಬುದು ಒಂದು ಇನ್ನುಂದು ಸಮಸ್ಯೆ ಆಗುತ್ತದೆ.ಒಟ್ಟಾರೆ ಮನುಷ್ಯನ ಸಾಮೂಹಿಕ ಅಸ್ತಿತ್ವ ಹಾಗೂ ಅವನ ವ್ಯಕ್ತಿಗತ ಅಸ್ತಿತ್ವಗಳು ಧರ್ಮದ ಸಾಮೂಹಿಕ ಹಾಗು ವ್ಯಕ್ತಿಗತ ಅಸ್ತಿತ್ವಗಳ ವ್ಯವಸ್ಥಾಪನೆಯಲ್ಲಿ ಅನಾದಿ ಕಾಲದಿಂದಲೂ ಹಲವು ಪ್ರಶ್ನೆಗಳನ್ನು ಎದುರಿಸುತ್ತಲೇ ಬಂದಿವೆ 

Friday, 25 November 2011

anudinaabhavaabdhiyalli....19

ಈ ಬಗೆಯ ಅತಿ ನಿಷ್ಟುರವಾದ ಬಿಡಿತನದ ನಂಬಿಕೆಯು ಎರಡು  ಮುಖ್ಯ ಪರಿಣಾಮಗಳನ್ನು ನಮ್ಮ ನೋಟಗಳಿಗೆ ತರುತ್ತದೆ.ಒಂದೆಂದರೆ ಅದು ಮನುಷ್ಯನ ಸಮೂಹದ ಒಳಗಿನ ಅಸ್ತಿತ್ವವನ್ನು ಮಿರಬೇಕಾದ ,ಇಲ್ಲವೇ ದಾಟಬೇಕಾದ,ಅಥವಾ ಹೇಗಾದರೂ ಮಾಡಿ ಬಿಡಿಸಿಕೊಂಡು ಹೊರಬರಬೇಕಾದ ಬಂಧನವನ್ನಾಗಿ ಪರಿಭಾವಿಸುತ್ತದೆ.ಅಂದರೆ ಲೋಕಜಿವನದ ನಮ್ಮ ಎಲ್ಲ ಅಂಟಿನ ನಂಟುಗಳು ಕ್ರಮೇಣ ಅವುಗಳಿಂದ ಬಿಡಿಸಿಕೊಂಡು ಹೊರ ಬರಬೇಕಾದ ''ಗಂಟು'' ಗಳೇ ಆಗಿವೆ.ಆದರೆ ಏನಿದ್ದರು ಮನುಷ್ಯನಿಗೆ ಸಾಮೂಹಿಕ ಅಸ್ತಿತ್ವದ ಹಂಗು ಬಿಟ್ಟದ್ದಲ್ಲ .ಅವನಿಗೆ ನಿತ್ಯ ಬೇಕಾಗುವ ಸುಖ,ಸೌಕರ್ಯ,ಸುರಕ್ಷಿತತೆ,ಇವುಗಳಿಗಾಗಿ ಆತ ತನ್ನ ಪಕ್ಕದ ಅಥವಾ ತನಗೆ ಪರಿಚಯವೇ ಇರದ ಹಲವಾರು ಮನುಷ್ಯರ ಮತ್ತು ಮನುಷ್ಯ ವ್ಯವಸ್ಥೆಗಳ ದಾಸನಾಗಿಯೇ ಬದುಕಬೇಕಾಗುವದು ಅನಿವಾರ್ಯವಾದ ಕ್ರಿಯೆ ಆಗಿದೆ.ಲೋಕದ ನಂಟುಗಳನ್ನು ಬಂಧನವೆಂದು ಬಿಂಬಿಸುವ ವಕ್ತಾರರೂ ತಮಗೆ ಅನಿವಾರ್ಯ ಇದ್ದಸ್ತಾದರು ಈ ಲೋಕಬಂಧದ ಮೇಲೆ ಅವಲಂಬಿತರೆ.ಎಲ್ಲ ಧಾರ್ಮಿಕ ಅಸ್ರದ್ಧೆಗಳ ಮೂಲವು ಇಲ್ಲಿಯೇ ಇದೆ ಎನ್ನಿಸುತ್ತದೆ.ಒಂದೆಡೆ ಲೋಕಬಂಧದಿಂದ ಹೊರಬರಬೇಕೆಂಬ ಹೇಳಿಕೆ ,ಇನ್ನೊಂದೆಡೆ ಅದರ ವ್ಯಾಪ್ತಿ ಪ್ರದೇಶದ ಹೊರಗೆ ಕಾಲಿಡುವದು ಆ ಬಗೆಯ ವಕ್ತಾರರಿಗೂ ಸಾಧ್ಯವಿಲ್ಲದ ವಾಸ್ತವ ಇವುಗಳಿಂದಾಗಿಯೇ ಧಾರ್ಮಿಕ ವ್ಯಕ್ತಿತ್ವಗಳು ಸುಳ್ಳು ಹೇಳುತ್ತಿವೆ,ಜಗತ್ತನ್ನು ಮೊಸಗೊಳಿಸುತ್ತಿವೆ ಎಂಬ ನಿಲುವು ಸಾರ್ವಜನಿಕವಾಗಿ ಒಪ್ಪಿತಗೊಳ್ಳುತ್ತ ಹೋಗುತ್ತದೆ.ಈ ಸಂಕಟವನ್ನು ಅರಿತೆ ಎಲ್ಲ ಧರ್ಮಗಳೂ ತಮ್ಮದೆಆದ ಒಂದು ಹಾವೇರಿ-ನ್ಯಾಯವನ್ನು ನಿರೂಪಿಸಲು ಪ್ರಯತ್ನಿಸಿವೆಯಾದರೂ
ಅವು ಎಷ್ಟು ಸಂಶಯಕ್ಕೆ ಎಡೆಮಾಡಿ ಕೊಡುತ್ತವೆ ಎಂದರೆ ಆಧುನಿಕ ಪ್ರಜ್ಞೆ ಅದನ್ನು ಒಪ್ಪುವದು ಬಹಳ ಕಷ್ಟ ವೆನಿಸುತ್ತದೆ.

Thursday, 24 November 2011

anudinaabhavaabdhiyalli....18

ತತ್ವಶಾಶ್ತ್ರದ ನೆಲೆಯಲ್ಲಿ ಕಾವ್ಯದ ಪ್ರಯೋಜನವು ಬಾಳಿಗೆ ಒದಗುವದೆಂದರೇನು?ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಹುಡುಕಿಕೊಳ್ಳದೆ ನಾವು ಕಾವ್ಯದ ತಾತ್ವಿಕ ಅಸ್ತಿತ್ವವನ್ನು ಪ್ರವೇಶಿಸುವಡೆ ಸಾಧ್ಯವಿಲ್ಲ.ಈ ಅರ್ಥದಲ್ಲಿ ಕಾವ್ಯ ಹಾಗು ತತ್ವಗಳ ಒಂದು
ಸಮಾನೋದ್ದೆಶಿತ ಕ್ರಿಯಾ ಸರಣಿಯನ್ನು ಮೊದಲು ಹುಡುಕಿಕೊಲ್ಲಲೆ ಬೇಕಾಗುತ್ತದೆ.
ಎಲ್ಲ ತತ್ವಜ್ಞಾನಗಲೂ ಮನುಷ್ಯನನ್ನು ಅವನ ದುಃಖದಿಂದ ಅವನನ್ನು ಮುಕ್ತಗೊಳಿಸಲು ಉದ್ಯುಕ್ತವಾಗಿವೆ ಎಂಬುದನ್ನು ನಮ್ಮ ಆರ್ಷೇಯ ಪಥ್ಯಗಳು ಮಮತ್ತೆ ಹೇಳುತ್ತವೆ.ಆದರೆ ಇಷ್ಟು ಅತ್ಯಂತ ಮೂಲಭೂತವಾದ ,ಎಲ್ಲ ಮನುಷ್ಯರ ನಿರಂತರ ಅವಶ್ಯಕತೆಯಾದ ,ಈ ಉದ್ದೇಶವನ್ನು ಇಡೇರಿಸುವ ಉದ್ದೇಶವನ್ನೇ ಹೊಂದಿದ ಅದರ ಕ್ರಿಯಾಭಿವ್ಯಕ್ತಿಯಲ್ಲಿ ಮಾತ್ರ ಪ್ರತಿ ಕ್ಷನವೂ ಅನಂತ ತೊದಕುಗಳಿಂದ ಕೂಡಿದೆ ಇದೇಕೆ ಹೀಗೆ?ಎಂಬ ಬಗೆಗೂ ಮನುಷ್ಯ ತುಂಬಾ ತಲೆ ಕೆಡಿಸಿಕೊಂಡಿದ್ದಾನೆ.ಇಷ್ಟೇ ಏಕೆ ಈ ಪ್ರಶ್ನೆಯ ತೊಡಕು ಕೂಡ ತತ್ವಜ್ಞಾನದ ಮೂಲಪ್ರಶ್ನೆಯಲ್ಲಿಯೆ ಕೂದಿಹೊಗಿದೆ.
ಬಹಶಃ ಆಚಾರ್ಯ ಮಧ್ವರೋಬ್ಬರೇ ಈ ಪ್ರಶ್ನೆಗೆ ಒಂದು ಗಟ್ಟಿ ಮುಟ್ಟಾದ ಉತ್ತರವನ್ನು ಕೊಡಲು ಯತ್ನಿಸಿದ್ದಾರೆ ಎನಿಸುತ್ತದೆ.ಅವರು
ಹೇಳುವಂತೆ ಎಲ್ಲ ಜೀವಗಳೂ ಮೂಲದಲ್ಲೇ ಭಿನ್ನವಾಗಿವೆ..ಅಂದರೆ ಒಂದೇ ಬಗೆಯ ದುಖನಿವಾರಣಾ ಮಾರ್ಗದಲ್ಲಿ ಇಬ್ಬರು ನಡೆಯುತ್ತಿದ್ದರೂ ಅವರ ಆ ಒಟ್ಟು ಸಾಧನೆಯ ಸ್ವರೂಪ,ಅನುಭವ,ಎಲ್ಲವೂ ಭಿನ್ನವಾಗಿರುತ್ತವೆ.ದ್ವೈತ ,ಅದ್ವೈತ,ಶೈವಾದ್ವೈತ,
ಏನೆ ಇರಲಿ ಯಾವ ಮಾರ್ಗದಲ್ಲಿ ನಾನು ನಡೆದರೂ ಅಲ್ಲಿನ ನನ್ನ ಅನುಭವ ಮತ್ತು ಸೋಲು ,ಗೆಳುವುಗೆಲಲ ನನ್ನವು
ಮಾತ್ರ.

Tuesday, 22 November 2011

anudinaabhavaabdhiyalli....17

ಇಂಥ ಸಂದರ್ಭದಲ್ಲಿ ಕವಿಯ ಒಳ ಸಂವೇದನೆಯೂ ಬಹಳಸಲ ತಪೋಭಂಗಿತವಾಗುವದು ಅನಿವಾರ್ಯ.ಆದರೆ ನಿಜವಾದ ಶಕ್ತ ಕವಿಯು ಕಾಲದ ಇಂಥ ಯಾವುದೇ ಪ್ರಲೋಭನೆಗಳನ್ನು ಮೀರಿ ನಿಂತೇ ನಿಲ್ಲುತ್ತಾನೆ.ಒಂದರ್ಥದಲ್ಲಿ ಈ ಬಗೆಯ ಸಂಕ್ರಮಣವನ್ನು ಅನುಭವಿಸಬೇಕಾಗುವ ಕವಿಯು ಹೆಚ್ಚು ಭಾಗ್ಯವನ್ತನೆಂದೆ ಎನ್ನಬೇಕು.ಏಕೆಂದರೆ ಬಾಳಿನ ಮೂಲಭೂತವಾದ ಸಂಕಟಗಳೊಂದಿಗೆ
ಅದರ ಅಭಿವ್ಯಕ್ತಿಯ ಮೂಲಭೂತ ಸಂಕಟಗಳೂ ಕೂಡಿದಾಗ ಆ ಕಾವ್ಯಕ್ಕೆ ಉಳಿದ ಕಾವ್ಯಗಳಿಗಿಲ್ಲದ ಒಂದು ವಿಶೇಷ ಕಳೆಯು ತಾನೇ ತಾನಾಗಿ ಬರುತ್ತದೆ.
ಆದರೆ ಬಾಳಿನ ಮೂಲಭೂತ ದುಖಗಳ ವಿಮೋಚನೆಗೆ ಕಾವ್ಯವು ಹೇಗೆ ಉಪಯುಕ್ತವಾಗುತ್ತದೆ?ಎಂಬ ಪ್ರಶ್ನೆಗೆ ನೇರವಾದ ಒಂದು ಸೂತ್ರರೂಪಿ ವ್ಯಾಖ್ಯಾನವು ಸಿಗುವದು ಬಹಳ ಕಷ್ಟವೆಂದೇ ಹೇಳಬೇಕು.ಆದರೂ ಒಂದು ಸ್ಥೂಲ ರೂಪದಲ್ಲಾದರೂ ಅದನ್ನು ಗುರುತಿಸಬಹುದಾದರೆ ಅದನ್ನು ಶಬದಾನುಭವ ಪ್ರಕ್ರಿಯೆ ಎಂದು ಗುರುತಿಸಬಹುದು.
ಈ ಶಬ್ದಾನುಭವದ ವಿವರವಾದ ಪರಿಶೀಲನೆಯು ಎರಡು ಮುಖ್ಯವಾದ ತತ್ವ ಶಾಖೆಗಳಲ್ಲಿ ತನ್ನ ಬೇರುಗಳನ್ನು ಚಾಚಿಕೊಂಡದ್ದು ನಮಗೆ ಸ್ಪಷ್ಟವಾಗಿ ಹೊಳೆಯುತ್ತದೆ.ಒಂದೆಂದರೆ ಅದು ತನ್ನ ಒಂದು ಬೇರನ್ನು ಭಾಶಾಶಾಷ್ಟ್ರದಲ್ಲೂ ಇನ್ನೊಂದನ್ನು ಧಾರ್ಮಿಕ ತತ್ವಜ್ನಾನದಲ್ಲೂ ಚಾಚಿಕೊಂಡಿರುತ್ತದೆ

Monday, 21 November 2011

anudinaabhavaabdhiyalli....16

ಆದರೆ ನಮಗೆ ಅದನ್ನು ಬಿಟ್ಟರೆ ಬೇರೆ ದಾರಿಯೂ ಇಲ್ಲ.ಹೀಗಾಗಿ ಒಂದು ಕವಿತೆ ಬಹುಜನ ಸಮಾಜದಲ್ಲಿ ಸಶಕ್ತವೆಂದು ಒಪ್ಪಿತವಾಗಿದ್ದರೂ ಆ ಕವಿತೆಯ ಶಕ್ತಿಯು ಪ್ರತಿಯೋಬ್ಬನಲ್ಲಿ ಅಂತರಾನುಭವಕ್ಕೆ ದಕ್ಕಿದ ರೀತಿ ಬೇರೆಯೇ ಆಗಿರುತ್ತದೆ
            ಈ ವಾಸ್ತವದ ಒಂದು ಪರಿಣಾಮವೆಂದರೆ ಹತ್ತು ಜನರು ಒಂದು ಕವಿತೆಯನ್ನು ಶ್ರೆಷ್ಟ್ಹವೆಂದ ತಕ್ಷನ ಒಂದು ಕವಿತೆ ಹತ್ತು
ಜನರನ್ನು ಏಕಕಾಲದಲ್ಲಿ ಯೆಕರಿತಿಯಲ್ಲಿ ಒಂದೇ ಬಗೆಯಲ್ಲಿ ಪ್ರಭಾವ ಬೀರಬಹುದೆಂಬ ಒಂದು ಆಕರ್ಷಕ ಆದರೆ ನಿಜವಲ್ಲದ ಒಂದು
ಸಿದ್ಧಾನ್ತವೆ ರೂಪುಗೊಳ್ಳುತ್ತದೆ.ದೇಶದ ಸ್ವಾತಂತ್ರ ಸಂಗ್ರಾಮ,ಯುದ್ಧ ಪ್ರಸಂಗಗಳಲ್ಲಿ ಹುಟ್ಟುವ ವಿರಾವೇಷದ ಪದ್ಯಗಳು ,ಯಾವುದೋ ಚಳುವಳಿಯ ನೆಪದಲ್ಲಿ ಮೂಡುವ ಸಮೂಹ ಗೀತೆಗಳು,ರಾಷ್ಟ್ರಗೀತೆ,ನಾದಗೀತೆಗಳಂಥ ಸಾಂಕೇತಿಕ ರಚನೆಗಳು ಈ ಬಗೆಯ ಕಾವ್ಯ ತಿಳುವಳಿಕೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಆಯಾ ಸಂದರ್ಭದಲ್ಲಿ ಬೆಳೆಸಿಬಿಡುತ್ತವೆ ಇದರ ಪರಿಣಾಮದ ಅತಿಯಾದ ಪ್ರಭಾವ ಸಾಮೂಹಿಕವಾಗಿ ಬೆಳೆದಾಗ ಕವಿತೆಯಲ್ಲಿ ''ಸಾಮಾಜಿಕತೆ''''ರಾಜಕೀಯ ಪ್ರಜ್ಞೆ''   ಪರಿಸರ ಪ್ರಜ್ಞೆ''''ಜಾಗತೀಕರಣದ ಚಿಂತನೆ''ಇವೇಲ್ಲವೂ ಇರಲೇಬೇಕೆಂಬ ಒಂದು ಅಸಜ ಒತ್ತಾಯವೂ ಕವಿಗಳ ಮೇಲೆ ಬಿಳತೊಡಗುತ್ತದೆ .
ಈ ಒತ್ತಡವನ್ನು ತಪ್ಪಿ ಕವಿಯೂ ಗಂಭೀರವಾಗಿ ಸ್ವಿಕರಿಸಿ ಬಿಟ್ಟರೆ ಆಗ ಎಲ್ಲ ಕವಿಗಳೂ ಕವಿತೆಯ ಒಂದು ''ನಮೂನೆ''ಯನ್ನು ತುಂಬಿಕೊಡುವ ಕರನಿಕರಾಗಿಬಿದುತ್ತಾರೆ .ಆಗ ಈ ಬಗೆಯ ಯೆಕತಾನತೆಯೂ ಬೇಸರ ಹುಟ್ಟಿಸಿ ಪ್ರತಿಯೊಬ್ಬ ಕವಿಯ ಸೋಪಜ್ನತೆಯನ್ನು ಹುಡುಕುತ್ತ ಹೋಗುವದು ವಿಮರ್ಶೆಯ ಚಟವಾಗಿಬಿಡುತ್ತದೆ ಇಲ್ಲವೇ ಹಟವಾಗಿಬಿದುತ್ತದೆ .ಇಂಥ ಸಂಕ್ರಮನಾವಸ್ಥೆಯ ಸಂದರ್ಭದಲ್ಲಿ ನಿಜವಾದ ಕಾವ್ಯಕರ್ಮದಲ್ಲಿ ತೊಡಗಿದ ಕವಿ ಒಂದಿಷ್ಟು ಅಜ್ನಾತವಾಸವನ್ನೂ
ಅನುಭವಿಸಬೇಕಾಗುವದು ಕಾಲಸಜವಾದ ಧರ್ಮವೇ ಆಗಿದೆ.

Sunday, 20 November 2011

anudinaabhavaabdhiyalli....17

ಆದರೆ ನಿಜವಾದ ಸಮಸ್ಯೆ ಇರುವದು ಯಾವ ಕಲೆಯ ದಾರಿಯು ಯಾವ ಧರ್ಮಪಥಕ್ಕೆ ನಮ್ಮನ್ನು ತಲುಪಿಸುತ್ತದೆ ಎಂಬ ಬಗೆಗೆ ಯಾವುದೇ ಸುತ್ರರೂಪಿ ನಿಯಮಗಳಿಲ್ಲವೆನ್ನುವ ಅದರ ಸ್ವರೂಪದಲ್ಲಿ ಇದೆ.ಈ ಪಥ ಮತ್ತು ಗಂತವ್ಯಗಳ ಬಗೆಗೆ ಇರುವ ಒಂದು
ಮೂಲಭೂತವಾದ ವಾದವು ಈ ಪ್ರಶ್ನೆಯನ್ನು ಮನುಷ್ಯನ ಸಮಗ್ರ ವ್ಯಕ್ತಿತ್ವವನ್ನೇ ಸಂಪೂರ್ಣವಾಗಿ ''ಬಿಡಿ''ಎಂದು ಗಮನಿಸುಮೂಲಕ ಉತ್ತರಿಸಲು ಪ್ರಯತ್ನಿಸುತ್ತದೆ.ಅದರ ಪ್ರಕಾರ ಪ್ರತಿಯೊಬ್ಬನ ದಾರಿ ಮತ್ತು ಗಂತವ್ಯಗಳು ಎಷ್ಟು ಬಿಡಿಬಿಡಿಯಾಗಿಯೂ ಭಿನ್ನವಾಗಿಯೂ ಇವೆಯೆಂದರೆ ಬಾಹ್ಯದಲ್ಲಿ ಒಂದೇ ದಾರಿಯಲ್ಲಿ ಹೊರಟವರಂತೆ ಕಾಣುವವರೂ ಹಾಗೆ ಚಲಿಸುತ್ತಿರುವದಿಲ್ಲ.ಇದರ ಒಟ್ಟೂ ಆಶಯವನ್ನು ನಾವು ಇದೆ ದಿಕ್ಕಿನಲ್ಲಿ ಬೆಳೆಸಿದರೆ ಆಗ ನಾವು ಕಲೆಯ ಜಗತ್ತಿಗೆ ಸಂಬಂಧಿಸಿದ
ಇನ್ನೊಂದು ತತ್ವದತ್ತ ನಡೆಯಬೇಕಾಗುತ್ತದೆ.ಅದರಂತೆ ಕಾವ್ಯಸ್ರಷ್ಟಿ ಹಾಗು ಕಾವ್ಯದ ರಸಗ್ರಹಣ ಇವೂ ಕೂಡ ತೀರ ವೈಯಕ್ತಿಕ ಪರಿಣಾಮಗಳು.ಒಂದು ದೊಡ್ಡ ಸಮೂಹವೆ ಒಂದು ಕ್ರತಿಯ ಬಗೆಗೆ ಒಂದೇ ಬಗೆಯ ಅನುಭವವನ್ನು ಪಡೆದಂತೆ ಕಾಣಿಸಿದರೂ ಅಲ್ಲಿ
ಅದು ಹಾಗೆ ಆಗಿರುವದಿಲ್ಲ.ನಮಗೆ ನಮ್ಮ ತೀರ ವಿಶೇಷವಾದ ಅನುಭವವನ್ನು ಹೇಳಿಕೊಳ್ಳಲು ತೀರ ವಿಶೇಷವಾದ ಭಾಷೆ ಇಲ್ಲವಾದ್ದರಿಂದ ನಾವೆಲ್ಲರೂ ಮತ್ತೆ ಮತ್ತೆ ಅದೇ ಶಬ್ದಗಳನ್ನು ಬಳಸಬೇಕಾಗುತ್ತದೆ.''ಅದ್ಭುತ'''ಸುಂದರ''''ಸಶಕ್ತ''ಅರ್ಥಪೂರ್ಣ''
ಇಂತಹ ಎಷ್ಟು ಶಬ್ದಗಳನ್ನು ನಾವು ಬಳಸಿದರೂ ಅವು ನಮ್ಮ ಅಸಲಿ ಅನುಭವದ ಸ್ವರೂಪಗಳನ್ನು ನಿರ್ವಚಿಸಲಾರವು.

anudinaabhavaabdhiyalli....16

ಕಾವ್ಯ ಸ್ರಷ್ಟಿಯ ಅಸ್ತಿತ್ವವನ್ನು ಅದು ಒಳಗೊಳ್ಳುವ ಭಾಷಿಕ ಸಾಮಗ್ರಿಯ ಕೇಂದ್ರದಿಂದ ನಿರ್ವಚಿಸುವ ಪ್ರಯತ್ನವು ಅದರ ಸಾಮಾಜಿಕ 
ವ್ಯಕ್ತಿತ್ವವನ್ನು ಕಟ್ಟಿಕೊಡಲು ಅತ್ಯವಷ್ಯವಾದುದೆ ಆಗಿದೆ.ಆದರೆ ಕಾವ್ಯದ ಅಸ್ತಿತ್ವದ ಆಲೋಚನೆಯನ್ನು ನಾವು ಇನ್ನೊಂದು ದಿಕ್ಕಿನಿಂದ 
ಪ್ರವೇಶಿಸುವ ಅಗತ್ಯವೂ ಇದೆ.ಮನುಷ್ಯನ ಬಾಳಿನ ಒಟ್ಟೂ ಚಲನೆಯಲ್ಲಿ ಈ ಕಾವ್ಯವೆಂಬ ಮಾಧ್ಯಮವು ವಹಿಸುವ ಪಾತ್ರವೇನು 
ಎಂಬುದು ಈ ಬಗೆಯ ಚಿಂತನೆಗೆ ಮಿಟುಗೊಲಾಗಿ ನಮ್ಮನ್ನು ತನ್ನತ್ತ ಸೆಳೆದುಕೊಳ್ಳುತ್ತದೆ.
ಬುದ್ಧ ತನ್ನ ಆರ್ಯ ಸತ್ಯಗಳ ಮೂಲಕ ಒಂದು ಮಹತ್ವದ ಮಾತಿನತ್ತ ನಮ್ಮ ಲಕ್ಷ ಸೆಳೆಯುತ್ತಾನೆ.ಆತ ಹೇಳುವಂತೆ ಜೀವನವು 
ದುಖಮಯವಾಗಿದೆ ಎಂದು ಒಪ್ಪಿದಾಗ ಮಾತ್ರ ಮನುಷ್ಯನಿಗೆ ಧರ್ಮದ ಅವಶ್ಯಕತೆ ಇದೆ ಎಂದು ನಾವು ಒಪ್ಪಬಹುದಾಗಿದೆ.ಹಾಗೆ ಒಪ್ಪಿದಾಗ ಮಾತ್ರ ನಿಜವಾದ ಧರ್ಮವೆಂದರೇನು?ಅದರತ್ತ ಚಲಿಸುವ ಬಗೆ ಏನು?ಇತ್ಯಾದಿ ಪ್ರಶ್ನೆಗಳೆಲ್ಲ ಮುಖ್ಯವಾಗುತ್ತವೆ.
ಧರ್ಮವೆಂಬ ಮಹಾ ಪಥಕ್ಕೆ ನಮ್ಮನ್ನು ಒಯ್ದು ತಲುಪಿಸುವ ಕಿರುದಾರಿಯಾಗಿ ನಮ್ಮ ಎಲ್ಲ ಕಲೆಗಳ ಅಸ್ತಿತ್ವವನ್ನೂ ನಾವು ಅನಾದಿ ಕಾಲದಿಂದಲೂ ಪರಿಭಾವಿಸುತ್ತ ಬಂದಿದ್ದೇವೆ.ಹೀಗಾಗಿ ಧರ್ಮದ ಬಗೆಗಿನ ನಮ್ಮ ಚಿಂತನೆಗಳು ಪರೊಕ್ಷವಾಗಿ ಕಲೆಯ ಬಗೆಗಿನ ಚಿಂತನೆಗಲಾಗಿಯೂ ಪರಿವರ್ತಿತವಾಗುತ್ತವೆ.

anudinaabhavaabdhiyalli....15

ಆದರೆ ಹರಿದಾಸರಿಗೆ ಈ ಸಂದರ್ಭದಲ್ಲಿ ಅವರಿಗೆ ತುಂಬಾ ಸಹಾಯವಾದುದು ಅವರ ನಂಬಿಕೆಯ ಜಗತ್ತಿನ ವಿಸ್ತಾರವಾದ ಪ್ರಮಾಣಗಳ ಒಳಗಿನ ರೂಪಕಗಲೆನ್ದೆ ಎನ್ನಬೇಕು.ವೇದ,ಉಪನಿಷತ್ತು,ಆಗಮಗಳು,ಪುರಾಣಗಳು,ಮಹಾಭಾರತ ,ರಾಮಾಯಣ,ಈ ಬ್ರಹತ್ ಚಿತ್ರ ಸಂಪುಟದ ನೆರವನ್ನು ಪಡೆಯದ ಒಬ್ಬ ಹರಿದಾಸರನ್ನು ನಾವು ಊಹಿಸಿಕೊಲುವದು ಸಾಧ್ಯವಿಲ್ಲ.ಅಲ್ಲದೆ ಬಹಳಷ್ಟು ಹರಿದಾಸರ ತಾತ್ವಿಕ ಭಿತ್ತಿಯಾಗಿದ್ದ ದ್ವೈತವನ್ನು ಹುಟ್ಟು ಹಾಕಿದ ಆಚಾರ್ಯ ಮಧ್ವರೆ ಈ ಸಂಪನ್ಮೂಲವನ್ನು ತತ್ವಜ್ಞಾನದ ಸಮರ್ಥನೆಗೂ ಹಾಗು  ಕಲಾತ್ಮಕವಾದ ಗೇಯ ರಚನೆಗಳಿಗೂ ಮೈದುಂಬಿ ಬಳಸಿಕೊಂಡರು .ಒಂದರ್ಥದಲ್ಲಿ ಅವರು ಈ ಸಂಪನ್ಮೂಲವನ್ನು ಹಾಗೆ ಬಳಸುವ ಮೂಲಕ ಮುಂದಿನವರಿಗೆ ಒಂದು ದ್ವೈತ ಕಾವ್ಯ ಮಿಮಾನ್ಸೆಯ ಒಂದು ನಕ್ಷೆಯನ್ನು ನಿರ್ಮಿಸಿಕೊಟ್ಟರು.
ಈ ಅರ್ಥದಲ್ಲಿಯೇ ನಾವು ದಾಸರ ಕನ್ನಡ ಭಾಷೆಯ ಬಳಕೆಯ ರೀತಿಯಲ್ಲೂ ಒಂದು ಬೇರೆ ಬಗೆಯನ್ನು ಕಾಣುತ್ತೇವೆ.ಅವರು ಎಷ್ಟೇ
ಪ್ರೀತಿಯಲ್ಲಿ ಕನ್ನಡದ ಜೊತೆಗೆ ಕೀಲಿಸಿಕೊಂದರೂ ಅವರ ಒಳ ಅನುಸಂಧಾನ ತಾನು ಕಾಲೂರಿದ ಸಂಸ್ಕ್ರತದ ಜೊತೆಗೂ ಗುಪ್ತ
ಸಂಬಧವನ್ನು ತನ್ನ ಆಪ್ತಸುಖಕ್ಕಾಗಿ ಬಹಳ ಆಳವಾಗಿ ಇಟ್ಟುಕೊಂಡಿರುತ್ತದೆ.ಈ ಕ್ರಿಯೆ ಬರಿ ಕನ್ನಡ ಬಲ್ಲವರಿಗೆ ತಿಳಿಯುವದೇ ಸಾಧ್ಯವಿಲ್ಲ.ಅದರ ವಾಚ್ಯವಾದ ಅಭಿವ್ಯಕ್ತಿಯೂ ನಮಗೆ ಅಲ್ಲಲ್ಲಿ ಕಾಣ ಸಿಗುತ್ತದಾದರೂ ಅದು ದಾಸರ ಭಾಷಿಕ ಬಾಹ್ಯ ಸಂಬಂಧದ ಬಗೆಗೆ ಯಾವುದೇ ಸುಳಿವು ಕೊಡುವದಿಲ್ಲ .ಅದರ ಬದಲು ಅದು ಭಾಷೆಯ ಹಂಗಿಲ್ಲದ ತಮ್ಮ ಭಕ್ತಿ -ತತ್ವದ
ಸಮರ್ಥನೆಗಾಗಿ ಅವರು ಬಳಸಿಕೊಳ್ಳುವ ಒಂದು ಉಪಾಯವಾಗಿ ಮಾತ್ರ ಅದು ಒಡೆದು ಕಾಣುತ್ತದೆ.
ಜಗನ್ನಾಥದಾಸರ ''ಹರಿಕಥಾಮ್ಬ್ರತಸಾರ''ದ ಅವರ ''ಇವು ಕನ್ನಡದ ಪದಗಳೆಂದು ನಿರಾಕರಿಸಬೇಡಿರಿ ''ಎಂಬ ಬಿನ್ನಹ
ಆ ಕಾಲದ ಭಾಷಿಕ ಇಕ್ಕತ್ತುಗಲಿಂದೆ ನಿರ್ಮಿತವಾಗಿದ್ದರೂ ಅದನ್ನು ಅವರು ಉದಾರವಾದಿ ಮತೀಯ ಇತಿವ್ರತ್ತವಾಗಿ
ಬದಲಾವಣೆ ಗೊಳಿಸಿ ಅರ್ಥವಿಸುತ್ತಾರೆ.

Saturday, 19 November 2011

anudinaabhavaabdhiyalli....15

ಆದರೆ ಹರಿದಾಸರು ಈ ಸಮಸ್ಯೆಯನ್ನು ಬೇರೆ ಬಗೆಯಲ್ಲಿ ಬಗೆಹರಿಸಿಕೊಂಡರು.ಅವರಿಗೂ ಭಾಷೆ ಹಾಗು ಭಾವ ಜಗತ್ತುಗಳ ನಡುವಿನ ಅಂತರ ಹಾಗು ವಿರೋಧ ಅನುಭವಸಿದ್ಧವಾದ ಸತ್ಯವೇ ಆಗಿದೆ.ತೀರ ಉತ್ಕಟ ಅನುಭವಗಳ ಅಭಿವ್ಯಕ್ತಿಯ ಸಂದರ್ಭದಲ್ಲಿ ಅವರೂ ಆ ಸಂಕಟವನ್ನು ಅನುಭವಿಸಿದವರೇ.ಭಗವಂತನ ದರ್ಶನವಾದ ಸಂದರ್ಭದಲ್ಲಿ ಅವರ ಅಭಿವ್ಯಕ್ತಿ ''ಆ ಬಾಹು,ಆ ಊರು ,ಆ ಜಾನು ,ಆ ಜಂಘೆ''ಎಂಬ ಬಗೆಯಲ್ಲಿ ದಿಕ್ಕುತಪ್ಪಿದವರಂತೆ ಬಡಬದಿಸುತ್ತದೆ.ಆದರೆ ಏನಿದ್ದರೂ ಅವರ ಭಾಷೆಯ ಬಗೆಗಿನ ವಿಷಾದ ,ವಚನಕಾರರಿಗಿದ್ದಷ್ಟು ಆಳವಾದದ್ದಲ್ಲ.ಇನ್ನೂ ಒಂದಿಷ್ಟು ಹತ್ತಿರವಾಗಿ ಹೋಗಿ ನೋಡಿದರೆ ದಾಸರು ತಮಗಿರುವ ಈ ರೀತಿಯ
ಭಾಷಿಕ ಮಿತಿಯನ್ನೂ ಅದು ತಮಗೆ ಪರಮಾತ್ಮನೇ ಒದಗಿಸಿದ ಕರುಣೆಯೆಂದು ಭಾವಿಸುತ್ತಾರೆ.ವಾದಿರಾಜರ ''ಏನು ಸುಕ್ರತವ ಮಾಡಿದಳೋ ಯೆಶೋದೆ''ಎಂಬ ಕೀರ್ತನೆ ದಾಸರ ಭಾಷೆಯ ಬಗೆಗಿನ ಪ್ರತಿಕ್ರಿಯೆಯು ಆಗಿರಬಹುದೆನಿಸುತ್ತದೆ.ಯೆಶೋದೆ ತನ್ನ ಮಗ ಕೃಷ್ಣನಿಗೆ ,ಬಾಲ ಗೋಪಾಲನಿಗೆ ,ತನ್ನ ಮಮತೆಯನ್ನು ಉಣಿಸುತ್ತಿದ್ದಾಳೆ ಅವಳು ಉಣಿಸುತ್ತಿರುದೆಲ್ಲ ಈ ಲೋಕ ಜೀವನದ ತಾಯಿಯೊಬ್ಬಳು ತನ್ನ ಮಗನಿಗೆ ತೋರಬಹುದಾದ ಮಮತೆ ಮಾತ್ರ.ಅದರ ಹೊರತು ಅವಳು ಬೇರೇನೂ ಮಾಡಲಾರಳು .ಒಂದರ್ಥದಲ್ಲಿ ಅವಳು ತೋರುತ್ತಿರುವ ಮಮತೆಯ ಕ್ರಿಯಾವಿಧಿಗಳು ಅರ್ಥಹೀನ ಕ್ರಿಯೆಗಳು.ಅವಳು''ಗಂಗಾ ಜನಕನಿಗೆ ಸ್ನಾನ ಮಾಡಿಸುವಳಂತೆ.''ಅಹಿತಲ್ಪನಿಗೆ ಹಾವು ಕಚ್ಚೀತು ಯೆನುವವಳಂತೆ''ಇವೆಲ್ಲವೂ ಅಲ್ಲಿರುವ ಲೌಕಿಕ ಅಲೌಕಿಕಗಳ ವ್ಯಾಮಿಶ್ರಣದಿಂದಾಗಿಯೇ ಅಪೂರ್ಣ ಹಾಗು ಅರ್ಥಹೀನ ಆಚರೆಣೆಗಳು ಆದರೆ ದಾಸರ ವಿಷಿಸ್ಥತೆ ಇರುವದೆ ಈ ಅನಿವಾರ್ಯವಾದ ಮಿತಿಯನ್ನೇ ತಮ್ಮ ಭಾಗ್ಯವೆಂದು ಭಾವಿಸುವ ಕ್ರಮದಲ್ಲಿದೆ.ಹರಿದಾಸರು ಎಂದೂ ವಚನಕಾರರೆನ್ತೆ ಭಾಷಾ
ವಿಶಾದಯೋಗವನ್ನು ಅನುಭವಿಸಲಿಲ್ಲ ಎಂಬುದು ಅವರ ಶಕ್ತಿಯು ಅಹುದು ಹಾಗು ಮಿತಿಯು ಅಹುದು ಎಂಬುದನ್ನು
ನಾವು ಗಮನಿಸಬಹುದು.
  

anudinaabhavaabdhiyalli....14

ಕಾವ್ಯ ಸ್ರಷ್ಟಿಯ ಇನ್ನೊಂದು ಸಮಸ್ಯೆಯೂ ನಮ್ಮ ಕವಿಗಳನ್ನು ತುಂಬಾ ಕಾಡಿಸಿದೆ.ಅದೆಂದರೆ ಭಾವ ಜಗತ್ತಿನ ಅವಶ್ಯಕತೆಗಳನ್ನು 
ಪೂರೈಸಲು ಭಾಷೆಯ ಶಕ್ತಿಗೆ ಆಗದಿರುವದು.ಅಂದರೆ ಕವಿಗೆ ಅಭಿವ್ಯಕ್ತಗೊಳಿಸಬೇಕಾದ ಒಂದು ಭಾವ ಸಮುಚ್ಚಯವಿದೆ.ಅದು ಅಭಿವ್ಯಕ್ತಗೊಳ್ಳಲು ತನ್ನದೇ ಆದ ರೀತಿಯಲ್ಲಿ ಧದಪಡಿಸುತ್ತಿದೆ ಈಗ ಅದಕ್ಕೆ ತಕ್ಕ ಭಾಷೆ ಬೇಕು.ಕವಿಯ ಪ್ರತಿಭೆಯ ಸಮುಚ್ಚಯದಲ್ಲಿ 
ಪ್ರಬಲವಾದ ಭಾಷೆಯ ಶಕ್ತಿಯೂ ಇದೆ.ಆದರೆ ಅವುಗಳ ನಡುವೆ ಸಮಬಲದ ಹೊಂದಾಣಿಕೆ ಇಲ್ಲ.ಭಾವದ ಭಾರ ಹೆಚ್ಚಾಗಿ ಭಾಷೆ 
ಕುಸಿಯುವದು ಇಲ್ಲವೇ ಭಾಷೆಯ ಭಾರ ಹೆಚ್ಚಾಗಿ ಭಾವದ ಮುಖವು ಮುಚ್ಚಿಹೋಗುವದು ಇವು ಎಲ್ಲ ಕಾವ್ಯಗಳೂ ಎದುರಿಸಲೇಬೇಕಾದ ಅಗ್ನಿದಿವ್ಯಗಲಾಗಿವೆ.ಇ ಸಂಕಟವನ್ನು ನಮ್ಮ ಕವಿಗಳು ಎಷ್ಟು ಆಳವಾಗಿ ಅನುಭವಿಸಿದ್ದಾರೆಂದರೆ ಎಷ್ಟೋ ಸಲ 
ಅವರ ಭಾವ ಜಗತ್ತಿನ ಒಂದು ಪ್ರಬಲವಾದ ಪ್ರಶ್ನೆಯಾಗಿಯೂ ಅದು ಅವರನ್ನು ಕಾದಿದೆ.
ನಮ್ಮ ವಚನಕಾರರು ಮತ್ತು ಹರಿದಾಸರು ಈ ಪ್ರಶ್ನೆಯನ್ನು ಅನುಭವಿಸಿದ,ಹಾಗು ಪರಿಹಾರ ಹುಡುಕುಕಿಕೊಂಡ ಕ್ರಮ ತೀರ 
ವಿಶಿಷ್ಟವಾದುದು .ವಚನಕಾರರಿಗೆ ಭಾಷೆಯ ಶಕ್ತಿಯ ಮೇಲೆ ಅಪನಂಬಿಕೆ,ಸಂಶಯ,ನಿರಾಶೆಗಳು ತುಂಬಿಕೊಂಡಿವೆ.ಕಾವ್ಯಕ್ಕೆ ಈ ಹಿಂದೆ ವಸ್ತುವಾಗಿ ಸಹಜವಾಗಿ ದಕ್ಕುತ್ತಿದ್ದ ವೈದಿಕ ಜಗತ್ತಿನ ಜೊತೆಗೂ ವಚನಕಾರರು ಒಂದು ಬಗೆಯ ದಾರ್ಶನಿಕ ವಿರೋಧವನ್ನು 
ತಾತ್ವಿಕ ಭೂಮಿಕೆಯ ಅಗತ್ಯವಾಗಿ ರೂಧಿಸಿಕೊನ್ದದ್ದರಿನ್ದ ಆ ಜಗತ್ತಿನ ಸಂಪನ್ಮೂಲವನ್ನು ಅವರು ಮುಟ್ಟುವನ್ತಿರಲಿಲ್ಲ.ಆದರೆ ತಮ್ಮ 
ಒಳಗಿನ ಪ್ರಚಂಡವಾದ ಭಾವ ಪ್ರಪಂಚವನ್ನು ಅಬಿವ್ಯಕ್ತಿಸದೆ ಇರುವದೂ ಅವರಿಗೆ ಸಾಧ್ಯವಿರಲಿಲ್ಲ.ಅದಕ್ಕಾಗಿ ಅವರು ತಮ್ಮ 
ಅವಶ್ಯಕತೆಗಾಗಿ ಅತ್ಯಂತ ಅನನ್ಯವಾದ ,ಆದೀಮವೆಮ್ಬಂತೆ ಕಾಣುವ,ಸುತ್ತಲಿನ ಭೂಮ ಬ್ರಮ್ಹಾನ್ದವನ್ನೇ ನೆಚ್ಚಿದ,ಒಂದು 
ತೀರ ವಿಶಿಷ್ಟವಾದ ಕಾವ್ಯ ಭಾಷೆಯನ್ನೂ ಅವರು ಸ್ರಷ್ಟಿಸಿಕೊಳ್ಳುವದು ಅವರ ಅನಿವಾರ್ಯವಾದ ಹಾಗು ಅನುಭವಗಳ 
ವ್ಯಾಖ್ಯಾನದ ಆಕ್ರತಿಗಳ ಒಳ ಒತ್ತಡಗಳ ಅನಿವಾರ್ಯ ಪರಿಣಾಮವೇ ಆಗಿತ್ತು.ಇಷ್ಟಾದರೂ ಅವರ ವಚನಗಲ್ಲಿ  ನಮಗೆ 
ಮತ್ತೆ ಮತ್ತೆ ಕಾಣುವ ಅವರ ಭಾಷೆಯಂಬ ಮಾಧ್ಯಮದ ಬಗೆಗಿನ ತೀವ್ರ ಹೋರಾಟವೂ ಅವರ ಒಟ್ಟು ಚಿಂತನ ಜಗತ್ತಿನ 
ಒಂದು ದೊಡ್ಡ ಭಾಗವಾಗಿಯೇ ನಮಗೆ ಕಾಣುತ್ತದೆ.ಅಲ್ಲಮ ಅಭಿವ್ಯಕ್ತಿಯೆನ್ನುವದೆ ''ಶಬ್ದ-ಸೂತಕ''ಎನ್ನುತ್ತಾನೆ.ಅನುಭವದ 
ಹತ್ತರ ಹೋಗಲು ನಡೆವ ಭಾಷೆಯ ''ಶಬ್ದದ ಲಜ್ಜೆಯನ್ನು''ಆತ ಗುರುತಿಸುತ್ತಾನೆ.ಮಾತೆಂಬ ಜೋತಿರ್ಲಿಂಗದ ಬಗೆಗೆ 
''ನುಡಿಯುವವ'' ''ಪಾತಕಿ'' ಎನ್ನುತ್ತಾನೆ ಅಲ್ಲಮ.

Friday, 18 November 2011

anudinaabhavaabdhiyalli....13

ನಮ್ಮ ಜಾನಪದ ಕವಿಗಳು ಕೂಡ ತಮ್ಮ ಈ ಬಗೆಯ ಅನುಭವಗಳನ್ನು ತುಂಬಾ ಸುಂದರವಾಗಿ ಹೇಳಿಕೊಂಡಿದ್ದಾರೆ.''ಆದಾವು ನಮ
ಜ್ವಾಳ ,ಉಳದಾವು ನಮ ಹಾಡ '' ಎನ್ನುತ್ತಾಳೆ ನಮ್ಮ ಹಳ್ಳಿಯ ಗರತಿ.ಅದು ನಿಜವೇ.ಬದುಕು ಮುಗಿಯುತ್ತದೆಯೇ ವಿನಃ ಬರಹವು
ಮುಗಿಯುವದಿಲ್ಲ.ನಿತ್ಯ ಬದುಕಿನ ಸುಖ-ದುಖಗಳು,ಜಂಜಾಟಗಳು,ಸರಸ-ವಿರಸಗಳು,ಇವುಗಳನ್ನೆಲ್ಲ ಎಷ್ಟು ಕವಿತೆಗಳ ಮಾಪುಗಳ ಮೂಲಕ ಅಳೆದು ಮುಗಿಸುವದು ಸಾಧ್ಯ?ಆದರೆ ಜಾನಪದ ಕವಿಗೆ ಇರುವ ಒಂದು ಅನುಕೂಲವೆಂದರೆ ಆತನ ಕಾವ್ಯ-ಪ್ರಜ್ಞೆ ಒಂದು ಪ್ರತ್ಯೇಕವಾದ ಅಸ್ತಿತ್ವವಾಗಿ ಅವನಲ್ಲಿ ಬೇರು ಬಿಟ್ಟಿರುವದಿಲ್ಲ.ಇದರಿಂದಾಗಿ ಅವನ ಕವಿತೆ ಅವನ ಬದುಕಿನ ಪ್ರಾಕ್ರತಿಕ ಚಟುವಟಿಕೆಗಳ ಒಂದು ಭಾಗವಾಗಿಯೇ ಕೆಲಸ ಮಾಡುತ್ತದೆ.ಹೀಗಾಗಿ ನಮ್ಮ ಜಾನಪದ ಕವಿತೆಗೆ ನಿಸರ್ಗ ಸಹಜವಾದ ಚೆಲುವು
ಅತ್ಯಂತ ಸಹಜ ಗತಿಯಲ್ಲಿ ಅರಳಿ ನಿಲ್ಲುತ್ತದೆ.ಅದರ ಇನ್ನೊಂದು ಮುಖ್ಯ ಲಕ್ಸನವೆಂದರೆ ಅದು ಇರುವದೆ ಹಾಡಿಕೊಳ್ಳಲು.ಅರ್ಥದ ಪದರುಗಳು ಲಯದ ತಾನಗಳಲ್ಲಿ ಅರಗಿ ಹೋಗುವ -ಪವಾದಸದ್ರಷವಾದ   ಕ್ರಿಯೆ -ಇಲ್ಲಿ ಯಾರಿಗೂ ಗೊತ್ತಾಗದಂತೆ ನಡೆದು ಹೋಗುತ್ತದೆ ಲೋಕಜೀವನದ  ಪ್ರತಿಯೊಂದು ಭಾವ-ಬಿನ್ದುಗಳೂ ಈ ಕಾವ್ಯದಲ್ಲಿ ಅನಂತ ರಸಲೋಕಗಳನ್ನು ನಿರ್ಮಿಸುತ್ತಲೇ ಇರುತ್ತವೆ.
 .

Thursday, 17 November 2011

anudinaabhavaabdhiyalli....12

ಕನ್ನಡದ ಕವಿಗಳು ಈ ದಾರಿಯಲ್ಲಿ ತಮ್ಮ ಬಹಳಷ್ಟು ಚಿಂತನೆಗಳನ್ನು ಗದ್ಯ ಬರಹದ ಮೂಲಕವೂ ಹಾಗು ಕಾವ್ಯದ ಮೂಲಕವೂ
ವ್ಯಕ್ತಪಡಿಸಿದ್ದಾರೆ.''ಉಡುಪೆನಾಸ್ಮಿಸಾಗರಂ ''ಎನ್ನುತ್ತಾನೆ ಕಾಳಿದಾಸ.''ಕಾಲೋಹ್ಯಯಂ ನಿರ್ವಧಿರ್ ವಿಪುಲಾಚ ಪ್ರಥ್ವಿ'' ಎನ್ನುತ್ತಾನೆ ಭವಭೂತಿ.''ಇಲ್ಲಿ ನೋಲ್ಪುದು ಪದುಮನಾಭನ ಮಹಿಮೆ ಮಾತ್ರವನು''ಎನ್ನುತ್ತಾನೆ ಕುಮಾರವ್ಯಾಸ.''ಹಲಗೆ ಬಳಪವ ಪಿದಿಯದೊಂದದಗ್ಗಲಿಕೆ''ಯೂ ಅವನಿಗಿದೆ.ಆತ ''ಪದವಿಟ್ಟು''ನಂತರ ''ಅಳುಪದವನಂತೆ.''ಇದು ಸಾಧ್ಯವೇ?ಸಾಧುವೆ?ಎಂದು ನಮಗೆ ಸಂಶಯವೂ ಬರಬಹುದು.ತನ್ನ ಕಾವ್ಯವನ್ನು ''ಅಬ್ಬಬ್ಬ ಎಂಚ ಪೋರ್ಲಾಂದೆಂದು ''ತುಳುವರು ಮೈಯುಬ್ಬಿ ಕೇಳಬೇಕೆಂದು ರತ್ನಾಕರವರ್ಣಿಯ ಆಶೆ.''ಬರಕೋ ಪದಾ ಬರಕೋ''ಎಂದು ಬಿನ್ನವಿಸುತ್ತಾನೆ ಶರೀಫಜ್ಜ.''ಹೇಳಿದರೆ ಹಾಳಾಗುವದು ಅನುಭವದ ಸವಿಯು/ಹೇಳದಿರೆ ತಾಳಲಾರ ಕವಿಯು''ಇದು ಕುವೆಂಪು ಅವರ ಸಂಕಟ.''ನಕ್ಷೆ ಹಿಡಿದು ತದಕಾಡಬೇಡ ನಕ್ಷತ್ರ ಮಾರ್ಗವನ್ನು/ತೊಂಡು ಮೆವಂಗೆ ದಾರಿ ಕೇಳದಿರು ಹತ್ತು ದುರ್ಗವನ್ನು''ಇದು ಬೇಂದ್ರೆಯವರ ಪ್ರೀತಿಯ ಆವ್ಹಾನ.ಅವರೇ ಹೇಳುವಂತೆ ಇ ಇಡೀ
ಕಾವ್ಯಲೋಕವೇ ಒಂದು ದೊಡ್ಡ ಕಾಡು.ಇಲ್ಲಿ ''ನೂರು ಮರ ,ನೂರು ಸ್ವರ/ಒಂದೊಂದು ಅತಿ ಮಧುರ''.ಇದು ಅದರ ಎಲ್ಲ ಕಾಲದ
ಪ್ರಕ್ರತಿ ಸಹಜ ವ್ಯಾಪಾರವೇ ಆಗಿದೆ.ಕವಿಯ ವೈಯಕ್ತಿಕ ಬಾಳಿನ ಬಗೆಗೆ ಎಲ್ಲರಿಗೂ ಆಸಕ್ತಿ ಇರಲಾರದು .ಅದಕ್ಕೆಂದೇ ಆತ ತನ್ನ ''ಪಾಡು''ಏನೆ ಇದ್ದರೂ ಅದರ ''ಹಾಡು''ಗಳನ್ನಷ್ಟೇ ಜಗತ್ತಿನ ರಸಿಕರಿಗೆ ಕೊಡಬೇಕು.''ನೂರಾರು ಭಾವದ ಬಾವಿ,ಎತ್ತಿಕೋ ನಿನಗೆ
ಬೇಕಾದಷ್ಟು ಸಿಹಿನಿರ/ಪಾತ್ರೆಯಾಕಾರಗಳ ಗೊಡವೆ ಏತಕೆ ನಿನಗೆ ಆಗಬೇಕಾದದ್ದು ದಾಹ ಪರಿಹಾರ''ಇದು ಕಾವ್ಯ
ಜಗತ್ತಿನ ಸಂಕ್ರಮನಾವಶ್ತೆಯಲ್ಲಿ ಕವಿ ಜಿ ಎಸ ಶಿವರುದ್ರಪ್ಪನವರು ಕೊಡುವ ಪರಿಹಾರ.

Wednesday, 16 November 2011

anudinaabhavaabdhiyalli....11

ಹಾಗಾದರೆ ಈ ಬರೆಯುವ ಹಾಗು ಓದುವ ವರ್ಗಗಳ ಜೀವನದ ಸಮಸ್ಯೆಗಳು ಬರಹದ ಅಭಿವ್ಯಕ್ತಿಯ ಹಾಗು ಅದರ ಆಸ್ವಾದನೆಯ 
ಸಮಸ್ಯೆಗಳಾಗಿ ಹೇಗೆ ಪ್ರಕಟಗೊಳ್ಳುತ್ತವೆ ಎಂಬುದು ಸಾಹಿತ್ಯ ಲೋಕದ ನಿರಂತರ ಚಿಂತನೆಯಾಗಿದೆ.
ಸಾಮಾನ್ಯವಾಗಿ ನಾವು ಈ ಇಡಿ ಆಲೋಚನೆಯನ್ನು ಗಮನಿಸುತ್ತ ಬಂದ ಬಗೆ ಹೀಗಿದೆ..ಮನುಷ್ಯನ ಬದುಕಿನಲ್ಲಿನ ಎಲ್ಲ ಬಗೆಯ 
ಭಾವಸ್ಥಿತಿಗಳನ್ನು ನಾವು ಸುಖ ಹಾಗು ದುಖವೆಂಬ ಎರಡೆ ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದೇವೆ.ಬೇಸರ,ಸಿಟ್ಟು,ದ್ವೇಷ,ಉದಾಸಿನತೆ ಇಂಥ ಹಲವು ವೈವಿಧ್ಯಮಯ ಭಾವಗಳನ್ನೂ ನಾವು ಈ ಎರಡು ವಿಭಾಗಗಳಲ್ಲೇ ವಿಂಗಡಿಸಿ ಕೊಂಡಿದ್ದೇವೆ.ಶಬ್ದ ರೂಪಿ ಆಕ್ರತಿಯಲ್ಲಿ ಅವು ಎಲ್ಲವೂ ಬಿಡಿಬಿಡಿಯಾಗಿಯೇ ಸ್ಪಷ್ಟವಾಗಿ ನಮಗೆ ಅನುಭವಕ್ಕೆ ಬರುತಿದ್ದರೂ ಅವುಗಳ ಒಟ್ಟು ಸ್ವರೂಪಗಲನ್ನು ನಾವು ತಾತ್ವಿಕವಾಗಿ ಆ ಎರಡೆ ವಿಭಾಗಗಳಲ್ಲಿ ಗುರುತಿಸಿದ್ದೇವೆ.ಇವುಗಳನ್ನು ಬೇಕೆಂದರೆ ಅನುಭವಗಳ ಸ್ವರೂಪದ ಸ್ಥಾಯಿ ಹಾಗು ಸಂಚಾರಿ ರೂಪಗಲೆನ್ದು ನಾವು ತಿಳಿಯಬಹುದು.
ಅನುಭವದ ಸ್ರಜನ ಕಾಲದಲ್ಲಿ ಕವಿಯ ಗಮನಿಕೆಯು ಆಯಾ ಅನುಭವದ ಸಂಚಾರಿ ವಿವರಗಳ ಮೇಲೆಯೇ ಕೆನ್ದ್ರಿಕ್ರತವಾಗಿದ್ದರೂ ಅವು ಒಟ್ಟಾರೆಯಾಗಿ ಕೊಡುವ ಅನುಭವದ ತಾತ್ವಿಕ ಸ್ವರೂಪವು ಬದುಕಿನ ತಾತ್ವಿಕ ಸ್ವರೂಪವನ್ನು ಗ್ರಹಿಸಲು ನಮಗೆ ಉಪಯುಕ್ತವಾಗುವದು ಅದರ ಸ್ಥಾಯಿ ಸ್ವರೂಪವೇ.

Tuesday, 15 November 2011

anudinaabhavaabdhiyalli....11

ಒಂದರ್ಥದಲ್ಲಿ ಕಾವ್ಯ ಬರೆಯುವ ಹಾಗು ಓದುವ ಎರಡೂ ಕ್ರಿಯೆಗಳೂ ಒಂದೇ ಶಕ್ತಿಯ ಆವಿರ್ಭಾವಗಳು.ಇಬ್ಬರಿಗೂ ಆ ಪ್ರಬಲವಾದ
ಸಾಮರ್ಥ್ಯ ಇರಲೇಬೇಕು.ಹಾಗೆಂದೇ ಅದನ್ನು ಭಾವಯಿತ್ರಿ ಪ್ರತಿಭೆ ಹಾಗೂ ಕಾರಯಿತ್ರಿ ಪ್ರತಿಭೆ ಎಂದು ಗುರುತಿಸಿ ಅವುಗಳ ನಡುವಿನ ಅವಿನಾಭಾವ ಸಂಬಂಧವನ್ನು ಸರಿಯಾಗಿಯೇ ಗುರುತಿಸಲಾಗಿದೆ.
ಆದರೆ ರೂಪುಗೊಂಡ ಕಾವ್ಯಭಾಷೆಯ ಅನುಭವ ನಮಗಾಗಲು ಅದರ ವಿಸಂಕೇತಿಕರಣವನ್ನು ನಾವು ಮಾದಿಕೊಳಲೆಬೇಕಾಗುತ್ತದೆ ಈ ವಿಸಂಕೆತಿಕರಣದ ಪಾಠಗಳನ್ನು ನಾವು ಶೈಕ್ಷನಿಕವಾಗಿ  ಕಲಿಸಲಾರೆವು.ಆದರೆ ಸಾಕ್ಷರತೆಯ ಅತಿಯಾದ ಪ್ರಸರಣದಿಂದ ಅಕ್ಷರ ಬಲ್ಲವರೆಲ್ಲರಿಗೂ ,-ಕಾವ್ಯಭಾಷೆಯೂ ಅಕ್ಷರಗಲನ್ನೆ ಒಳಗೊಂಡಿರುವದರಿಂದ -ನಾನೂ ಕೂಡ ಈ ಭಾಷೆಯನ್ನೂ ತಿಳಿಯಲು ಹಕ್ಕುದಾರನೆಂಬ ಅಹಂಕಾರವು ಬೆಳೆಯುತ್ತದೆ.ಅಕ್ಷರ ರೂಪಿ ಭಾಷೆಯ ಒಳಗಿನ ಸೂಕ್ಷ್ಮತೆಗಲನ್ನು ಗಮನಿಸದೆ ಎಲ್ಲವನ್ನು ಅರ್ಥವಿಸಬಹುದಾದ ಭಾಷೆಯೆಂದು ತಿಳಿಯುವ ಈ ಬಗೆಯ ಗಮನಿಕೆಗಳು ಭಾಷೆಯ ಅರ್ಥದಾಚೆಗಿನ ಅಸ್ತಿತ್ವವನ್ನೇ ನಿರಾಕರಿಸುವ ಅತಿರೆಕಕ್ಕೂ ಒಮ್ಮೊಮ್ಮೆ ಹೋಗುತ್ತುವೆ.ಆಗ ಕಾವ್ಯವೆಂದರೆ ಯಾವುದೋ ಒಂದು ಅರ್ಥವನ್ನು ಬಿಡುಗಡೆ ಮಾಡುವ ಸಾಧನವಾಗಿ
ಮಾತ್ರವಾಗಿ ಕಾಣತೊಡಗುತ್ತದೆ.ಇಷ್ಟೇ ಏಕೆ ತಪ್ಪಿ ಕಾವ್ಯದ ಒಳ ಮೈಯಲ್ಲಿ ಅನೇಕ ಅರ್ಥದಾಚೆಗಿನ ಪದರುಗಳು ಓದುಗನನ್ನು ಬಾ ಎಂದು ಕರೆಯುತ್ತಿದ್ದರೂ ಆತನ ಪ್ರಜ್ಞೆ ಆ ಕರೆಗೆ ಕುರುಡಾಗಿರುತ್ತದೆ ಇಲ್ಲವೇ ಕಿವುಡಾಗಿರುತ್ತದೆ ಇದನ್ನೇ ನಾವು ಕಾವ್ಯ ಸಂಸ್ಕೃತಿಯ ಅವಸರ್ಪಿಣಿ ಕಾಲವೆಂದು ಕರೆಯಬಹುದು.ಈ ಮೊದಲೇ ಗುರುತಿಸಿದಂತೆ ಕಾರಯಿತ್ರಿ ಮತ್ತು ಭಾವಯಿತ್ರಿ ಶಕ್ತಿಗಳ
ಜೀವಕೆಂದ್ರವು ಒಂದೇ ಆಗಿರುವದರಿಂದ ಅವುಗಳ ಸಮಸ್ಯೆ ಪ್ರತ್ಯೇಕವಾಗಿ ಇರುವದೆ  ಇಲ್ಲ .ಹೀಗಾಗಿ ಕಾವ್ಯ ಓದುವವನ ಸಮಸ್ಯೆ ಹಾಗು ಕಾವ್ಯ ಬರೆಯುವವನ ಸಮಸ್ಯೆಗಳು ಎಲ್ಲೊ ಒಂದೆಡೆ ಒಂದೇ ಮೂಲದ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
       

Sunday, 13 November 2011

anudinaabhavaabdhiyalli....10

ಮುಖ್ಯವಾಗಿ ಈ ಬಗೆಯ ಭಾಷಾ ವ್ಯವಸ್ಥೆಯ ಅಗತ್ಯವಿರುವವರು ರೂಪಿಸಿಕೊಳ್ಳುವ ಭಾಷಾ ಸ್ವರೂಪವನ್ನು ನಾವು ನಿರ್ವಚಿಸಿಕೊಳ್ಳುವದು ಈ ಭಾಷೆಯ ಸ್ವರೂಪದ ಬಗೆಗಿನ ಚರ್ಚೆ ಮಾತ್ರವಾಗದೆ ಅದು ಆ ಭಾಷೆಯನ್ನೂ ರೂಪಿಸಿಕೊಳ್ಳುವ ಮನಸ್ಸಿನ ಕಾರ್ಯವಿಧಾನವನ್ನೂ ನಮಗೆ ತಿಳಿಸಿಕೊಡುತ್ತದೆ.
ಒಂದು ರೀತಿಯಲ್ಲಿ ಇಂಥ ಭಾಷೆಯನ್ನು ನಾವು ಭಾಷೆಯಲ್ಲದ ಭಾಷೆ ಎಂದು ಕರೆಯಬಹುದೇನೂ.ಅಂದರೆ ಈ ಭಾಷೆ ಸಂವಹನ ಗೊಳಿಸುವ ವಿಷಯವು ಆಯಾ ವ್ಯಕ್ತಿಗಳ ವೈಯಕ್ತಿಕ ಭಾವ ಜಗತ್ತಿನ ಅಭಿವ್ಯಕ್ತಿಯ ಅವಶ್ಯಕತೆಯನ್ನು ಪೂರೈಸುತ್ತದಾದರೂ ಅದನ್ನು
ಸಹಜವಾದ ಭಾಷಾ ಕುಟುಂಬದ ಸದಸ್ಯನನ್ನಾಗಿ ಕಾಣುವದು ನಮಗೆ ಸಾಧ್ಯವಾಗುವದಿಲ್ಲ.ಹೀಗೆ ಭಾಷೆಯ ಮೂಲಕವೇ ಭಾಷೆಯ
ಆಚೆಗಿನ ಅವಶ್ಯಕತೆಗಳನ್ನು ಪುರೈಸಿಕೊಳ್ಳುವ ಒಂದು ಉಪಾಯವಾಗಿ ನಮಗೆ ಈ ಬಗೆಯ ಕಾವ್ಯಭಾಷೆಯು ಉಪಯೋಗಕ್ಕೆ ಬರುತ್ತದೆ.ಒಟ್ಟಾರೆಯಾಗಿ ಹೇಳುವದಾದರೆ ಕಾವ್ಯಭಾಷೆಯೆನ್ನುವಡೆ ಒಂದು ವಿಚಿತ್ರವಾದ ,ಎರಡು ವಿಭಿನ್ನ ಲೋಕಗಳ ಪೌರತ್ವ ಹೊಂದಿದ ,ಭಾಷೆಯಾಗಿದೆ .ಈ ಎರಡೂ ಲೋಕಗಳನ್ನು ಅದು ಎಷ್ಟು ಗಟ್ಟಿಯಾಗಿ ,ವಿಸ್ತಾರವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ
ಎಂಬುದರ ಮೇಲೆಯೇ ಅದರ ಶಕ್ತಿ ಮತ್ತು ಆಯಷ್ಯಗಳು ಅವಲಂಬಿಸಿರುತ್ತವೆ
ಕವಿತೆಯನ್ನು ಓದುವ ವ್ಯಕ್ತಿಗೆ ಈ ಭಾಷೆ ಅವಗತವಾಗುತ್ತ ಹೋದಂತೆ ಆ ಕಾವ್ಯವು ತನ್ನ ಎಲ್ಲ ಸುಖಗಳನ್ನು ಕೊಡುತ್ತ ಹೋಗುತ್ತದೆ.

Friday, 11 November 2011

anudinaabhavaabdhiyalli....9

ಅದೇನೇ ಇದ್ದರೂ ನಾವು ನಮ್ಮ ಗಮನವನ್ನು ಈ ಕಾವ್ಯಭಾಷೆಯೆಂಬ ವಿಚಿತ್ರವಾದ ಶಕ್ತಿಯ ಬಗೆಗೆ ಕೇಂದ್ರಿಕರಿಸುವದಾದರೆ ನಾವು ಅದರ ಭಿನ್ನ ಸ್ವರೂಪವನ್ನು ,ಭಿನ್ನವಾದ ಶಕ್ತಿಯನ್ನು ಗುರುತಿಸಿಕೊಳ್ಳಬಹುದು.ಒಂದರ್ಥದಲ್ಲಿ ಈ ಬಗೆಯ ಭಾಷೆಯ ವಿಶಿಸ್ತ್ಥತೆಯ ಸ್ವರೂಪವೇನು,ಅದು ಹುಟ್ತುವದೆಲ್ಲಿಂದ ,ಅದಕ್ಕೂ ನಾವು ನಿತ್ಯ ಬಳಸುವ ಭಾಷೆಗೂ ಇರುವ ಅಂತರವೇನು,ಈ ಎಲ್ಲ ಪ್ರಶ್ನೆಗಳು ನಮ್ಮ ಕಾವ್ಯ-ಮಿಮಾನ್ಷೆಯ ಬಹು ಮುಖ್ಯ ಚಿಂತನೆಗಳಾಗಿವೆ 
ಒಂದೆಂದರೆ ಈ ಕಾವ್ಯ ಭಾಷೆಯ ಮೊಟ್ಟಮೊದಲ ಭಿನ್ನ ಸ್ವರೂಪವೆನ್ದರೆ ಅದು ಹೇಳುತ್ತದೆ,ತೋರಿಸುತ್ತದೆ,ಕೇಳಿಸುತ್ತದೆ,ಆದರೆ  ಅದೇನು ಮಾಡಿದರೂ ಅದರ ಅರ್ಥದ ಸ್ವರೂಪವು ನಮ್ಮ ಲೋಕಭಾಷೆಯ ಬಗೆಯಲ್ಲಿ ಇರುವದಿಲ್ಲ.ಒಂದು ವೇಳೆ ಅದು ಲೋಕ ಭಾಷೆಯಲ್ಲಿಯೇ ಇದೆ ಎಂದಂತೆ ಕಂಡರೂ ಅದರ ಒಳ ವ್ಯವಸ್ಥೆ ಬೇರೆಯೇ ಆಗಿರುತ್ತದೆ.ಈ ಭಿನ್ನತೆಯ ಒಂದು ಗುಣವೆಂದರೆ ಅದರ ಅರ್ಥದ ರೀತಿ ಲೋಕಭಾಷೆಯ ಭಾವದ ವ್ಯಾಕರಣವನ್ನು ಪಾಲಿಸುವದಿಲ್ಲ.''ಚಂದ್ರಮುಖಿ'' ಎಂಬ ಶಬ್ದಕ್ಕೆ ಹಾಗೆ ನೋಡಿದರೆ ಅದು ಕಟ್ಟಿ ಕೊಡುವ ಭಾವ ಜಗತ್ತಿನ ಹೊರಗೆ ಅದಕ್ಕೆ ಅಸ್ತಿತ್ವವೇ ಇಲ್ಲ .ಈ ಭಾವ ಜಗತ್ತಿನ ಸದಸ್ಯರಾಗದ ಮನುಷ್ಯರಿಗೆ ಅದು ಒಂದು 
ಹುಚ್ಚುತನವಾಗಿಯೂ ಕಂಡೀತು.ಅಥವಾ ಶಬ್ದ,ಕಾಲ,ಬುದ್ಧಿಯ ದುಂದು ಬಳಕೆಯೇನ್ದೂ ಎನ್ನಿಸಬಹುದು.ಆದರೆ ಇದನ್ನೆಲ್ಲಾ ಮೀರಿಯೂ ಈ ಬಗೆಯ ಭಾವ ಜಗತ್ತಿನಲ್ಲಿ ಬದುಕುವ,ಈ ಬಗೆಯ ಭಾಷೆಯ ಅವಶ್ಯಕತೆಯನ್ನು ಆಳವಾಗಿ ಅನುಭವಿಸುವ ಮನುಷ್ಯರು ಯಾವ ಕಾಲದಲ್ಲೂ ಇದ್ದೆ ಇದ್ದರು,ಇದ್ದೆ ಇರುತ್ತಾರೆ 

Thursday, 10 November 2011

ಅನುದಿನ ಭವಾಬ್ಧಿಯಲ್ಲಿ ..೮

ಮೊದಲನೆಯದಾಗಿ ನಾವು ಇಲ್ಲಿ ಒಂದು ವಿಚಿತ್ರವನ್ನು ಗಮನಿಸಬಹುದು.ನಿಜವಾಗಿಯೂ ಚಂದ್ರನಿಗೂ ಈ ಹುಡುಗಿಯ ಮುಖಕ್ಕೂ
ಯಾವುದೇ ತಾರ್ಕಿಕ ಅಥವಾ ವೈಜ್ಞಾನಿಕ ಸಂಬಂಧವಿಲ್ಲ.ಹಾಗೆ ನೋಡಿದರೆ ಇದು ಅಸಂಬದ್ಧ ಕೂಡಾ.ಆದರೆ ನಾವು ಆ ಪರಿಭಾಷೆಯನ್ನು ಬಳಸುತ್ತೇವೆ.ನಮಗೆ ಈ ಭಾಷೆಯ ಹಿಂದಿನ ಲೋಕಸತ್ಯದ ಬಗೆಗೆ  ಗೊತ್ತಿದ್ದೂ ನಾವು ಈ ಭಾಷೆಯನ್ನೂ
ಬಳಸುತ್ತೇವೆ.ನಮಗೆ ಈ ಬಗೆಗೆ ಸಂಕೋಚವೂ ಇರುವದಿಲ್ಲ,ಸಂಶಯವೂ ಇರುವದಿಲ್ಲ.ಅದರ ಬದಲು ಒಮ್ಮೊಮ್ಮೆ ಸಂತೋಷವೇ ಆದೀತು.ನಾನು ಹೇಳಬೇನ್ದಿರುವ ಭಾವಕ್ಕೆ ತಕ್ಕ ಭಾಷೆ ಸಿಕ್ಕಾಗ ಆದ ಸಂತೋಷವದು.ಅಂದರೆ ಈ ಬಗೆಯ ಭಾಷೆಯ ಬಳಕೆಯಲ್ಲಿ ನಾವು ಅದರ ಈ ಪೂರ್ವದ ಅರ್ಥವನ್ನು ಹೊರತೆಗೆದು ,ಅದನ್ನು ಖಾಲಿ ಮಾಡಿ ,ಅಲ್ಲಿ ಬೇರೊಂದೇ ಅರ್ಥವನ್ನು ತುಮ್ಬುತ್ತಿರುತ್ತೇವೆ
ಯೆನ್ದನ್ತಾಇತು ಅಂದರೆ ಈ ಬಗೆಯ ಭಾಷೆಯನ್ನೂ ಸ್ರಷ್ಟಿಸುವವರಿಗೆ ಎರಡು ಕಲೆಗಳು ಗೊತ್ತಿರಬೇಕು.ಒಂದದೆನ್ದರೆ ಮೊದಲು ಭಾಷೆಗೆ ಈ ಮೊದಲು ಇರುವ ಅರ್ಥವನ್ನು ಹೊರಕಳಿಸಿ ಅದನ್ನು ಖಾಲಿ ಮಾಡುವದು ಹಾಗೂ ತನ್ನ ಅಗತ್ಯಕ್ಕೆ ತಕ್ಕುದಾದ ಅರ್ಥವೂ ಅದರಲ್ಲಿ ಹುಟ್ಟುವಂತೆ ಅವಶ್ಯವಿರುವ ಅರ್ಥವನ್ನು ಅದರಲ್ಲಿ ತುಂಬುವದು .ಈ ಕಲೆಯಲ್ಲಿ ಪಳಗಿದವನನ್ನೇ ನಾವು ದೊಡ್ಡ ಶಕ್ತಿಯ ಕವಿಯೆಂದು ಗುರುತಿಸುತ್ತೇವೆ.
ಭಾಷೆಯಲ್ಲಿನ ನಿಗದಿತ ಅರ್ಥವನ್ನು ಖಾಲಿ ಮಾಡುವ ಕೆಲಸವೂ ಅಷ್ಟೇನು ಸುಲಭದ ಕೆಲಸವಲ್ಲ.ಆ ಕೆಲಸವನ್ನು ಮಾಡಲು ತೊಡಗಿದಾಗಲೇ ಅದರ ಅನುಭವ ಆಗುವನ್ಥಹದು.ನಾವು ನಿತ್ಯವೂ ಭಾಷೆಯ ಈ ನಿಗದಿತ ಅರ್ಥದೊಂದಿಗೆ ಎಷ್ಟು ಹೊಂದಿಕೊಂಡು ಬಿಟಿರುತ್ತೆವೆಂದರೆ ನಮಗೆ ಒಂದೇ ಒಂದು ಶಬ್ದಕೂ ಪ್ರತಿ ಶಬ್ದ ಸಿಕ್ಕುವದು ಕಠಿಣ.ನಾವು ನಿತ್ಯವೂ ನಮ್ಮ
ಎಲ್ಲ ಭಾಷೆಯ ಅಗತ್ಯಗಳನ್ನೂ ಹೀಗೆ ನಮ್ಮ ನಮ್ಮ ಬಡತನದಲ್ಲೇ ಕಳೆಯುತ್ತಿರುತ್ತೇವೆ.ಬಾಳಿನ 'ಅರ್ಥ-ಬಡತನಕ್ಕಿಂತ'
ಮನುಷ್ಯನ ಈ ಬಗೆಯ ಭಾವಕ್ಕಗತ್ಯವಾದ ಭಾಷೆ ಇಲ್ಲದ ಬಡತನ ಒಂದು ಜನಾಂಗದ ನಿಜವಾದ ಸಾಂಸ್ಕ್ರತಿಕ ಬಡತನ
ಎನ್ನಬೇಕು.ಇದು ಬಹಳ ಅಪಾಯಕಾರಿ ಕೂಡಾ .ಈ ಅಪಾಯವನ್ನು ಗುರುತಿಸಲಾಗದ,ಗುರುತಿಸಿಯೂ ನಿರ್ಲಕ್ಷಿಸುವ
ಜನಾಂಗವು ರೋಗಗ್ರಸ್ತ ಜನಾಂಗವೂ ಆಗಿರುತ್ತದೆ.

Wednesday, 9 November 2011

ಅನುದಿನ ಭವಾಬ್ಧಿಯಲ್ಲಿ .. ೭

ಇಂಥ ಸಂದರ್ಭಗಳಲ್ಲಿ ನಾವು ಅನುಭವಿಸುವ ಒಂದು ಮುಖ್ಯ ಸಂಕಟವೆಂದರೆ ನಾವು ಹೇಳಬೇಕಾದ ಅಥವಾ ಹೇಳಿಕೊಳ್ಳಬೇಕಾದ 
ಭಾವಕ್ಕೆ ತಕ್ಕುದಾದ ಭಾಷೆ ನಮಗೆ ದೊರೆತ ಸಮಾಧಾನ ನಮಗೆ ಇರುವದಿಲ್ಲ.ಇನ್ನೊಬ್ಬರಿಗೆ ಇದು ಯಾವ ರಿತೀಂದಲೂ ಸಂಬಧಿಸಿದ ವಿಷಯವೇ ಅಲ್ಲ.ಇದು ಕೇವಲ ನನ್ನ ಒಳಗಿನ ಭಾವ ಜಗತ್ತು ಮತ್ತು ಅದರ ಅಭಿವ್ಯಕ್ತಿಗಾಗಿ ತಕ್ಕ ಭಾಷೆಯ ಹುಡುಕಾಟದ ,ನನ್ನದೇ ಆದ ಧಡಪದ ಮಾತ್ರ.ನನಗೆ ನನ್ನ ಅವಶ್ಯಕತೆಗೆ ತಕ್ಕಂಥ ಭಾಷೆ ಸಿಕ್ಕಿತು ಎಂಬ ಸಮಾಧಾನವು ಸಿಗಬಹುದು ,ಸಿಗಲಿಕ್ಕು ಇಲ್ಲ.ಅಥವಾ ಅಂಥ ಭಾಷೆ ಸಿಕ್ಕಲ್ಲೋಲ್ಲದೆಂಬ ಭಾವವೂ ಮೂಲದ ಭಾವ ಜಗತ್ತಿನ ಒಂದು ಅವಿಭಾಜ್ಯ 
ಅಂಗವಾಗಿ ಕಾದತೊದಗಬಹುದು ಏನಿದ್ದರೂ ಇದು ಪ್ರತಿಯೊಬ್ಬ ಮನುಷ್ಯನ ತೀರ ಖಾಸಗಿಯಾದ ಹುಡುಕಾಟ ಮಾತ್ರ.
ಈ ಸಂಕಟಕ್ಕೆ ಬಹಳ ಹಳೆಯ ಕಾಲದಿಂದಲೂ ಗುರುತಿಸಿಕೊಳ್ಳಲಾದ ಒಂದು ಭಾಷಿಕ ಉಪಾಯವೆಂದರೆ ಒಂದನ್ನು ಇನ್ನೊಂದಕ್ಕೆ ಹೋಲಿಸಲು ಸಾಧ್ಯವಾಗುವಂತ ಕೆಲವು ಹೋಲಿಕೆಗಳನ್ನು ಹುಡುಕಿಕೊಲ್ಳುವದು ಉದಾಹರೆಣೆಗೆ ನಾನು ಪ್ರೀತಿಸಿದ ಹುಡಿಗೆಯ ಮುಖವನ್ನು ಚಂದ್ರನಿಗೆ ಹೋಲಿಸಿ ಅವಳನ್ನು ''ಚಂದ್ರಮುಖಿ'' ಎಂದು ಕರೆಯುವದು.ಹೀಗೆ ನಾವು ಒಬ್ಬಳ ಮುಖವನ್ನು ಚಂದ್ರನಿಗೆ 
ಹೋಲಿಸಿದಾಗ ಆಗುವ ಭಾಷಿಕ ಪ್ರಕ್ರಿಯೆಗಳನ್ನು,ಹಾಗು ಅವುಗಳ ಪರಿಣಾಮಗಳನ್ನು ಸುಕ್ಸ್ಮವಾಗಿ ಗಮನಿಸಿದರೆ ಆಗ ನಮಗೆ 
ಕವಿಯ ಕಾವ್ಯ-ಭಾಷೆಯ ಬಗೆಗೆ ಮಾತ್ರವಲ್ಲ ಅವನ ಭಾವ ಜಗತ್ತಿನ ಹಲವು ವಿಷಿಸ್ಥ ಸ್ವರೂಪಗಲು ನಮಗೆ ತಿಳಿಯುತ್ತವೆ.

ಅನುದಿನ ಭವಾಬ್ಧಿಯಲ್ಲಿ ..೬

ಒಂದು ಮಾತಂತೂ ಸತ್ಯ.ಜೀವನದಲ್ಲಿ ಅನುಭವದ ಅರ್ಥದ ಶೋಧನೆ ಹಾಗು ಶೋಧಿತವಾದ ಅನುಭವದ ಅರ್ಥಕ್ಕೆ ತಕ್ಕ ಭಾಷೆಯ ಶೋಧನೆ ಎರಡರಲ್ಲೂ ಮನುಷ್ಯನನ್ನು ಆಳವಾಗಿ ತೊಡಗಿಸಿಕೊಳ್ಳುವದು ಅನುಭವದ ಅರ್ಥದ ಶೋಧನೆಯೇ ಆಗಿದೆ.ಏಕೆಂದರೆ ಅದರ ಹಿಂದೆ ಒದಗಿದ ದುಃಖದಿಂದ ಪಾರಾಗುವ ಒಂದು ದೊಡ್ಡ ಪ್ರಲೋಭನೆಯೂ ಇರುತ್ತದೆ.ಇಷ್ಟಕ್ಕೂ ಸಾಮಾನ್ಯವಾಗಿ ನಮಗೆಲ್ಲ ಭಾಷೆ ಬೇಕಾಗುವದೆ ಭಾವದ ಒತ್ತಡದಿಂದ ಹೊರಬರಲು ಮಾತ್ರ.ಈ ಒತ್ತಡದಲ್ಲಿ ನಾವು ಈ ಉದ್ದೇಶಕ್ಕಾಗಿಯೂ ಭಾಷೆಯನ್ನು ಬಳುಸುತ್ತೆವೆಯಾದರೂ ಅಲ್ಲಿ ನಮ್ಮ ಲಕ್ಷವೆಲ್ಲ ಭಾವದ ಬಿಡುಗಡೆಯ ಕಡೆಗೆ ಇರುತ್ತದೆಯೇ ವಿನಃ ಅದಕ್ಕಾಗಿ ನಾನು ಬಳಸುತ್ತಿರುವ ಭಾಷೆ ಅದಕ್ಕೆ ಸೂಕ್ತವಾಗಿದೆಯೆ ಎಂಬ ಬಗೆಗೆ ನಮ್ಮ ಗಮನ ಅಷ್ಟಾಗಿ ಇರುವದೆಇಲ್ಲ.
ಆದರೆ ಎಲ್ಲ ಕಾಲದಲ್ಲೂ ಕೆಲವು ವಿಚಿತ್ರ ತರಹದ ಜನರು ಇರುತ್ತಾರೆ.ಇವರಿಗೆ ನಮ್ಮೆಲ್ಲರಂತೆಯೇ ಅನುಭವದಿಂದ ಬಿಡುಗಡೆ ಯಂತೂ ಬೇಕೇ ಬೇಕು.ಆದರೆ ಇವರು ಅದಕ್ಕಾಗಿ ಬಳಸುವ ಭಾಷೆಯ ಬಗೆಗೆ ವಿಶೇಷ ಕಾಲಜಿಉಲ್ಲವರಾಗಿರುತ್ತಾರೆ.ಇ ಕಾಳಜಿಯು ಅವರಿಗೆ ಏಕೆ ಹುಟ್ಟುತ್ತದೆ ಎಂಬ ಜಿಜ್ಞಾಸೆಯೂ ಸಾಕಷ್ಟು ನಡೆದಿದೆ.ಆ ಚರ್ಚೆಗಳನ್ನೆಲ್ಲ ನೋಡಿದರೆ ಒಂದೇ ಒಂದು ಉತ್ತರ ಮತ್ತೆ ಮತ್ತೆ ಅಲ್ಲಿ ದೊರೆತಂತೆಕಾನುತ್ತದೆ ಅದೆಂದರೆ ಅವರಿಗಿರುವ ಭಾಷೆಯ ಮದದ ವ್ಯಸನವೆಂದೆ ನಾವು ಹೇಳಬೇಕಾಗುತ್ತದೆ.
ಹಾಗಾದರೆ ಈ ವ್ಯಸನವಾದರೂ ಎಲ್ಲರಿಗೂ ಏಕಿಲ್ಲ ಎಂಬ ಪ್ರಶ್ನೆಗೆ ಸರ್ವರಿಗೂ ಸಮಾಧಾನಕರವಾದ ಉತ್ತರ ನಮಗೆ ಇಂದಿಗೂ ಸಿಕ್ಕಿಲ್ಲ.ಆದರೆ ಆ ಬಗೆಗೆ ಒಂದು ಊಹೆಯನ್ನು ಹೀಗೆ ಮಾಡಬಹುದೇನೋ.
ಮನುಷ್ಯನ ಜೀವನದಲ್ಲಿ ಹಲವು ಸಲ ಕೆಲವು ವಿಚಿತ್ರ ಪ್ರಸಂಗಗಳು ಬರುತ್ತವೆ.ಆಗ ಅವನಿಗೆ ಏನನ್ನೂ ಬಹಳ ಆಳವಾಗಿ 
ಹೇಳಬೇಕೆನಿಸುತ್ತದೆ ಇಲ್ಲವೇ ತನಗೆ ತಾನೇ ಏನೂ ಹೆಲಿಕೊಲ್ಲಬೇಕೆನಿಸುತ್ತದೆ.ಆಗ ಅವನಿಗೆ ಭ್ಹಾಷೆಯ ಅವಶ್ಯಕತೆ 
ನಮಗೆಲ್ಲರಿಗೂ ಇದ್ದಂತೆಯೇ ಇರುತ್ತದೆ.ಆದರೆ ನಾವು ನಮಗೆ ದಕ್ಕಿದಸ್ಟು ಭಾಷೆಯ ಆಧಾರದ ಮೇಲೆಯೇ ಎಲ್ಲ
ಅವಶ್ಯಕತೆಗಳನ್ನೂ ಪೂರೈಸಿಕೊಂಡು ಬಿಟ್ಟಿರುತ್ತೇವೆ.ನಮ್ಮ ಭಾಷೆ ನಮ್ಮ ನಿಜವಾದ ಅಗತ್ಯವನ್ನು ಭಾಷೆಯ 
ನೆಲೆಯಲ್ಲಿಯಾದರೂ ಸರಿಯಾಗಿ ನಾವು ನಿರ್ವಹಿಸಿದೆವೆಯೇ ಎಂಬ ಬಗೆಗೆ ನಮ್ಮ ಕಾಳಜಿ ಇರುವದೆ ಇಲ್ಲ.
                          ಉದಾಹರಣೆಗೆ  ಒಬ್ಬ ಹುಡುಗ ಒಂದು ಹುಡುಗೆಯನ್ನು ಪ್ರೀತಿಸಿ ಅವಳ ಜೊತೆಗೆ ಅವನ ಮದುವೆಯೂ 
ನಿಶ್ಚಯವಾಗಿದೆಯೆಂದು ತಿಳಿದುಕೊಳ್ಳೋಣ.ಇನ್ನು ಮದುವೆಯಾಗಿಲ್ಲ.ಆದರೆ ಆಗಲಿದೆ.ಅವರಿಬ್ಬರೂ ತಮ್ಮ ತಮ್ಮ 
ಆಳವಾದ ಭಾವನೆಗಳನ್ನು ಹಂಚಿಕೊಳ್ಳಲು ಬಯಸಿದ್ದಾರೆ.ಈಗ ಅವರಿಗೆ ಒಂದು ಭಾಷೆ ಬೇಕು.ಎಂಥಹ ಸಾಮಾನ್ಯನಿಗೂ 
ಈಗ ಒಂದು ಭಾಷೆ ಬೇಕು.ಆ ಭಾಷೆ ಅವರ ಒಳ ಮನಸ್ಸುಗಳ ಭಾವದ ತಕ್ಕ ಸಂವ್ಹಹನವನ್ನು ನಿರ್ವಹಿಸಬೇಕು 
ಹಾಗಾದರೆ ಈಗ ಅವರು ಅಂಥ ಭಾಷೆಯನ್ನು ಎಲ್ಲಿಂದ ,ಹೇಗೆ ,ಪಡೆಯುತ್ತಾರೆ ಎಂಬುದು ಎಲ್ಲ ಬಗೆಯ ಕಾವ್ಯ -ಭಾಷೆಯ 
ಮೂಲಭೂತವಾದ ಚಿಂತನ ಕೇಂದ್ರವಾಗಿದೆ.ಸಾಮಾನ್ಯವಾಗಿ ಇಂಥ ಪ್ರಸಂಗಗಳಲ್ಲಿ ಎಲ್ಲರೂ ಒಂದು ಬಗೆಯ 
ಪಾರಂಪರಿಕ ,ರೂಧವಾದ ,ಭಾಷೆಯನ್ನು ಬಳಸುತ್ತಾರೆ.ನಾನು ನ್ಯಾಯಾಲಯದಲ್ಲಿ ಕೆಲಸಮಾಡುವಾಗ ಅನೇಕ 
ಪ್ರೇಮ-ಪತ್ರಗಳನ್ನು ನೋಡಿದೆ.ಬಹಳ ವಿಚಿತ್ರವೆನಿಸುತ್ತಿತ್ತು.ಆ ಮನುಷ್ಯ ಹಳ್ಳಿಯ ಅನಕ್ಸರಸ್ಥ ಕುಟುಂಬದಿಂದ 
ಬಂದವ ಆದರೆ ಅವನಿಗೆ ತನ್ನ ಪ್ರಿಯಕರಳನ್ನು ''ಚಂದ್ರಮುಖಿ'',''ಹೇ ನನ್ನ ಗುಲಾಬಿಯ ಹೂವೆ ''ಎಂದು ವರ್ಣಿಸಲು 
ಹೇಗೆ ಸಾಧ್ಯವಾಇತು ಎಂಬುದು ನನ್ನನ್ನು ತುಂಬಾ ಕಾಡಿತು.ನಾನು ಒಮ್ಮೆ ಆ ವ್ಯಕ್ತಿಯನ್ನು ಈ ಬಗೆಗೆ ಕೇಳಿದೆ ಕೂಡಾ.
ಆದರೆ ಆತ ''ಅದೇನ ಬಿಡ್ರಿ ,ಎಲ್ಲಾರಿಗೂ ಗೊತ್ತ ಇದ್ದ ಇರತೈತಿ ''ಎಂದ.ಅಂದರೆ ಕಾವ್ಯಭಾಷೆಯ ಬಳಕೆ 
ಎನ್ನುವದು ಕೇವಲ ಕವಿಗಳ ಸೋತ್ತೆನಲ್ಲ.ಅದನ್ನು ಎಲ್ಲರೂ ಅವಶ್ಯಕತೆ ಇದ್ದಾಗ ಲಭ್ಯವಿದ್ದಷ್ಟು ತಮ್ಮ 
ಸಂಪನ್ಮೂಲವನ್ನು ಬಳಸಿ ಉಪಯೋಗಿಸಿಕೊಳ್ಳುತ್ತಲೇ ಇರುತ್ತಾರೆ ಯೆನ್ದನ್ತಾಇತು ಹಾಗಾದರೆ ಕವಿಯು 
ಬಳಸುವ ಕಾವ್ಯಭಾಷೆಯ ವಿಶೇಷತೆ ಏನು ಎನ್ನುವದನ್ನು ನಾವಿಗನೋಡಬಹುದು.

Monday, 7 November 2011

ಅನುದಿನ ಭವಾಬ್ಧಿಯಲ್ಲಿ ...೫

ಮನುಷ್ಯನು ತನ್ನನ್ನು ತಾನು ಸ್ವತಂತ್ರನೆಂದೆ ತಿಳಿಯಲಿ ಅಸ್ವತಂತ್ರನೆಂದೆ ತಿಳಿಯಲಿ,ಅವು ಅವನ ಪರಿಪೂರ್ಣ ತಿಳಿವುಗಲಾಗಳಾರವು ಏಕೆಂದರೆ ಬದುಕಿನಲ್ಲಿ ನಾವು ಅಸ್ವತಂತ್ರರೆಂದು ನಾವು ಭಾವಿಸಿದರೂ ಅನುದಿನದ ಕರ್ಮಗಳಲ್ಲಿ ಅನೇಕ ನಿರ್ಣಯಗಳನ್ನು ನಮ್ಮ ಪ್ರಜ್ಞೆ ತನ್ನ ದತ್ತವಾದ ಸ್ವಾತಂತ್ರವನ್ನು ಬಳಸಿಕೊಂಡು ತೆಗೆದುಕೊಲ್ಲಳೆಬೇಕಾಗುತ್ತದೆ ಹೀಗಾಗಿ ತಾನು ಅಸ್ವ್ತಂತ್ರನೆಂದು ನಂಬಿದವನೂ ಒಂದು ಸ್ವಾಯತ್ತ ನಿರ್ಣಯವನ್ನು ತೆಗೆದುಕೊಂಡೆ ಇರುತ್ತಾನೆ.ಬಹಳಾದರೆ ಆ ತುರ್ತು ಮುಗಿದಮೇಲೆ ಅದರ ಫಲಗಳ ಅನುಭವದ ಸಂದರ್ಭದಲ್ಲಿ ಆತ ತಾನು ಅಸ್ವತಂತ್ರನೆಮ್ಬುದನ್ನು ತನ್ನ ಈಡಿ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಸ್ಮರಿಸಿಕೊಳ್ಳಬಹುದು.ಇನ್ನು ತನ್ನ ಪ್ರಜ್ಞೆಯು ಸ್ವತಂತ್ರವಾದುದೆಂದು ಹೊರಡುವ ಪ್ರಜ್ಞೆಗೆ ತನ್ನ ಕರ್ಮಗಳ ಕಾರ್ಯಾಚರೆಣೆಗೆ ಯಾವುದೇ ಮೂಲಭೂತವಾದ ತತ್ವವೇ ಇಲ್ಲದಿರುವದರಿಂದ ಅಲ್ಲಿ ಸುಖ-ದುಖಗಳ ಬಗೆಗಿನ ಜಿಜ್ಞಾಸೆಗೆ ಯಾವುದೇ ಗಟ್ಟಿಯಾದ ನೆಲೆಯೇ ಇರುವದಿಲ್ಲ.ಹೀಗಾಗಿ ದುಖವೆಂಬ ಅನುಭವದ ಅಸ್ತಿತ್ವವನ್ನೇ ನಿರಾಕರಿಸುವದು,ದುಖವಾದಾಗಲೂ ಆಗಿಯೇಇಲ್ಲ ಎಂಬಂತೆ ನಟಿಸುವದು ,ಅಥವಾ ಆ ದುಃಖಕ್ಕೆ ಯಾವುದೂ ಹೊರ ಕಾರಣಗಳನ್ನು ಹುಡುಕುತ್ತ ಹೋಗುವದು ಮತ್ತು ಆ ಕಾರಣಗಳನ್ನು ತಿದ್ದುತ್ತ ಕುಡುವದು ಇವು ಈ ಬಗೆಯ ಮನಸ್ಸಿನ ಚಟುವಟಿಕೆಗಲಾಗಿಬಿದುತ್ತವೆ ಹೀಗೆ ಈ ಬಗೆಯಲ್ಲಿ ನಡೆಯುವ ಎರಡೂ ಬಗೆಯ ಚಿಂತನೆಗಳೂ ಭಾಷೆಯ ಬಗೆಗೆ ರೂಪಿಸಿಕೊಳ್ಳುವ ಆಲೋಚನೆಗಳೂ ಕೂಡ ಭಿನ್ನವಾಗಿರುತ್ತವೆ.

ಅನುದಿನ ಭವಾಬ್ಧಿಯಲ್ಲಿ ....೪

ಮನುಷ್ಯನ ಮನಸ್ಸು ಕೆಲಸಮಾಡುವ ರೀತಿಗಳನ್ನು ತಿಳಿಯುವ ಕುತೂಹಲ ಮನುಷ್ಯನಿಗೆ ಅನಾದಿ ಕಾಲದಿಂದಲೂ ಇದ್ದಇದೆ.ಒಂದು ಮುಖ್ಯವಾದ ಕೇಂದ್ರದಲ್ಲಿ ಅದರ ಎರಡು ಪ್ರಮುಖ ಶಾಖೆಗಳು ಭಿನ್ನವಾದ ದಾರಿಯಲ್ಲಿ ಹೊರಟು ಭಿನ್ನವಾದ ಮಾರ್ಗ ಹಾಗು ಗಂತವ್ಯಗಳನ್ನು ಅವು ರೂಪಿಸಿಕೊಂಡಿವೆ.ಮನುಷ್ಯನ ಮೂಲಭೂತವಾದ ಅಸ್ತಿತ್ವವೇ ಅಸ್ವತಂತ್ರ ಎಂದು ನಂಬಿ ಹೊರಡುವ ಚಿಂತನೆಗಳು ಒಂದು ದಿಕ್ಕಿನಲ್ಲಿ ,ಹಲವು ವಿಭಿನ್ನ ಕವಲುಗಳಲ್ಲಿ ಬೆಳೆದರೆ ಮನುಷ್ಯನ ಪ್ರಜ್ಞೆಯ ಸಾಮರ್ಥ್ಯವನ್ನೇ ನಂಬಿ ಹೊರಟ ಚಿಂತನೆಗಳು ಬೇರೊಂದೇ ದಾರಿಯನ್ನು ಹಿಡಿದವು.ಆದರೆ ಇಲ್ಲಿಯೂ ಕೂಡ ಒಂದು ಮುಖ್ಯ ಮಾತೆಂದರೆ ಇವು ಎಷ್ಟೇ ಬೇರೆ ಬೇರೆ ಯಾಗಿಯೇ ಬೆಳೆಯಲು ಹೊರಟರೂ ಅವು ತಮ್ಮ ತಮ್ಮ ದಾರಿಯೋಳಗಿನ ಸಮಸ್ಯೆಗಳನ್ನು ಬಿಡಿಸಿಕೊಳ್ಳುವಾಗ ಪರಸ್ಪರವಾಗಿ ಅನೇಕ ಬಗೆಯ ಸಂಬಂಧಗಳನ್ನು ರೂಪಿಸಿಕೊಂಡಿವೆ.ಅವು ಪ್ರೀತಿಸಿವೆ,ಜಗಳಾಡಿವೆ ,ಮಾತು ಬಿಟ್ಟಿವೆ,ಒಂದನ್ನೊಂದು ಮುಗಿಸಿಬಿಡಲೂ ಕೂಡ ಬಯಸಿ ಸೋತಿವೆ,ಇದರಿಂದಾಗಿ ಇವುಗಳನ್ನು ಒಂದು ಬಗೆಯ ಸ್ವಾಯತ್ತ ಚಿಂತನ ಘಟಕಗಳೆಂದು ನಂಬಿ ಹೊರಡುವ ಎಲ್ಲ ಚಿಂತನೆಗಳೂ ತುಂಬಾ ಗೊಂದಲಗಳ ಗೂಡಾಗಿ ನಮಗಿಂದು ಕಾಣತೊಡಗಿವೆ.ಆಧುನಿಕ ಧಾರ್ಮಿಕ ಚಿಂತನೆಗಳು ಇಂಥ ಸಂದರ್ಭದಲ್ಲಿ ಅವುಗಳ ಸ್ವಾಯತ್ತತೆಯನ್ನು ಸಿದ್ಧಪಡಿಸುವದಕ್ಕೂ ತುಂಬಾ ಹೋರಾಡಿವೆ.ಅವು ಹೇಗೆ ಸಂಪೂರ್ಣವಾಗಿ ಭಿನ್ನವಾದ ಆಲೋಚನಾಕ್ರಮಗಳು ಎಂದು ತೋರಿಸಲು ಹೊರಟ ಪ್ರಸ್ಥಾನಗಳು ಸಹಜವಾಗಿಯೇ ಅಹಿಂಸಾತ್ಮಕವಾದ ,ತಮ್ಮ ವ್ಯಾಖ್ಯಾನ ಸಾಧ್ಯತೆಗಲಿನ್ದಾಗಿಯೇ ಉದಾರವಾದ 
ಸಂಭಾವ್ಯತೆಗಳನ್ನು ಉಳಿಸಿಕೊಂಡು ಬೆಳೆದವು.ಆದರೆ ಅವು ಎರಡು ವಿರೋಧಿ ಚಿಂತನೆಗಳೆಂದು ತಿಳಿದ ಪ್ರಸ್ಥಾನಗಳು 
ಅನಾವಶ್ಯಕವಾಗಿ ಹಿಂಸೆಯನ್ನು ಸ್ರಸ್ತಿಸಿದವು.
ಆದರೆ ಈ ಎರಡೂ ಬಗೆಯ ಗ್ರಹಿಕೆಗಳಿಗೂ ತಮ್ಮ ಅವಶ್ಯಕತೆಗೆ ತಕ್ಕಂತೆ ಭಾಷೆಯನ್ನೂ ರೂಪಿಸಿಕೊಳ್ಳುವ ಹೊನೆಯಂತು
ಇದ್ದಇತ್ತು.ಹೀಗೆ ಮನಸ್ಸು ಎಂಬ ಅಗೋಚರ ಇಂದ್ರಿಯದ ಸುತ್ತ ಹಬ್ಬಿದ ಈ ಬಗೆಯ ಭಿನ್ನ ತತ್ವಜ್ನಾನಗಳು 
ಭಾಷೆಯತ್ತ ಹೇಗೆ ಪ್ರವ್ರತ್ತಿಸುತ್ತ ಹೋದವು ಎಂಬುದನ್ನು ನಾವು ಈಗ ಗಮನಿಸಬಹುದು.

Sunday, 6 November 2011

ಅನುದಿನ ಭವಾಬ್ಧಿಯಲ್ಲಿ ..೩

ಮನುಷ್ಯನು ಬದುಕುವದೆ ಮೂರೂ ಸ್ತರಗಳಲ್ಲಿ.ದೇಹ,ಮನಸ್ಸು,ಬುದ್ಧಿ,ಎಂದು ಅವುಗಳನ್ನು ಗುರುತಿಸಿಕೊಳ್ಳಲಾಗಿದೆ ಭಾಷೆಯ ಅವಶ್ಯಕತೆಯೂ ಈ ಮೂರೂ ಸ್ತರಗಳಲ್ಲೂ ಇದ್ದಇದೆ.ಈ ಮೊದಲು ಚರ್ಚಿಸಿದ ಭಾಷೆಯ ಎರಡು ಬಗೆಯ ಪ್ರಯೋಜನಗಳು ಮನುಷ್ಯನ ದೇಹ ಮತ್ತು ಬುದ್ಧಿಗಳ ಅವಶ್ಯಕತೆಗಳಿಗೆ ಸಂಬಧಿಸಿದ ವಿಷಯಗಳಾಗಿವೆ.ಆದರೆ ಮನುಷ್ಯನ ಮನಸ್ಸಿನ ಅಗತ್ಯಗಳ ಸ್ವರೂಪವೇ ಬೇರೆ ಇದೆ.ಈ ಸ್ವರೂಪದ ಮುಖ್ಯ ಲಕ್ಷನ ಅದರ ಅನಂತವಾದ ಅಸ್ತಿತ್ವದಲ್ಲಿಯಇದೆ ಎನ್ನಬೇಕಾಗುತ್ತದೆ.;;'ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೊಕ್ಷಯೊ ''ಎಂಬ ಮಾತೂ ಇದನ್ನೇ ಬೇರೊಂದು ರೀತಿಯಲ್ಲಿ ಹೇಳುತ್ತಿರಬೇಕು.ಈ ಮನಸ್ಸಿನ ಯಾವುದೇ ಅಗತ್ಯವೂ ವ್ಯಕ್ತೀಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಮಾತ್ರವಲ್ಲ ಒಬ್ಬನೇ ಮನುಷ್ಯನಲ್ಲೂ ಅದು ಭಿನ್ನ ಭಿನ್ನ ಸಂದರ್ಭಗಳಲ್ಲಿ ಅದು ಭಿನ್ನವಾಗಿ ಇರುತ್ತದೆ.ಹೀಗಾಗಿ ಮನಸ್ಸಿನ ಭಾಷೆಯ ಅವಶ್ಯಕತೆಯೂ ಬಹಳ ಭಿನ್ನವಾದ ರೀತಿಯಲ್ಲಿಯೇ ಇರುತ್ತದೆ.
ಮನಸ್ಸಿನ ಈ ಬಗೆಯ ವಿಭಿನ್ನ ಸ್ಥಿತಿಗಳನ್ನು ಲೆಕ್ಕ ಹಾಕಿ ಇವು ಇಸ್ತೆನ್ದು ಹೇಳಲುಬಾರದು.ಹಾಗೆಂದು ಅವುಗಳ ಬಗೆಗೆ ಚಿಂತನೆಯನ್ನೇ ನಿಲ್ಲಿಸಲೂ ಆಗದು.ಅದಕ್ಕೆಂದೇ ಸ್ಥೂಲವಾಗಿ ಈ ಮನಸ್ಸಿನ ಅನುಭವಗಳನ್ನು ಸುಖ ಹಾಗು ದುಖಗಳೆಂಬ ಪರಿಭಾಷೆಯಲ್ಲಿ ಗುರುತಿಸಿಗೊಂಡು ನಮ್ಮ ಚಿಂತನೆ ಬೆಳೆದಿದೆ.
ಈ ಸುಖ -ದುಖಗಳು ಏಕೆ ಮತ್ತು ಹೇಗೆ ಹುಟ್ಟುತ್ತವೆ ಎಂಬುದರ ಚಿಂತನೆ ಧಾರ್ಮಿಕ ತತ್ವಜ್ಞಾನದ ದಾರಿ ಹಿಡಿದರೆ ಅವುಗಳ ಅವಶ್ಯಕತೆಗೆ ತಕ್ಕಂತೆ ಭಾಷೆಯನ್ನೂ ಮನುಷ್ಯ ಹೇಗೆ ರುಪಿಸಿಕೊಳ್ಳುತ್ತಾನೆ ಎಂಬ ಚಿಂತನೆ ಭಾಷಾಶಾಸ್ತ್ರದ ಹಾದಿ ಹಿಡಿದು 
ಮುನ್ನಡೆದಿವೆ.ಇದರ ಒಂದು ಪರಿಣಾಮವಾಗಿ ನಮ್ಮಲ್ಲಿ ಯಾವ ಬಗೆಯ ಭಾಷಾಶಾಸ್ತ್ರದ ಪ್ರಸ್ಥಾನಗಳೂ ತತ್ವಶಾಸ್ತ್ರದ 
ಉಪಾಂಗವಾಗಿಯೇ ಬೆಳೆದಿವೆ.ಆಟ ಭರ್ತರಹರಿ ಇರಲಿ ಅಭಿನವಗುಪ್ತನಿರಲಿ ಅವರೆಲ್ಲರೂ ಏಕಕಾಲದಲ್ಲೇ ತತ್ವಜ್ಞಾನಿಗಳು 
ಹಾಗು ಭಾಷಾಶಾಸ್ತ್ರಜ್ಞರು ಆಗಿರುವದು ಸಹಜವೇ ಆಗಿದೆ.
ನಾವು ಯಾವುದನ್ನು ಕಾವ್ಯಭಾಷೆಯೆಂದು ಕರೆಯುತ್ತೇವೋ ಅದರ ಅಸ್ತಿತ್ವವು ಮನುಷ್ಯನ ಈ ಸುಖ-ದುಖಾನುಭೂತಿಯ 
ಪರಿಪ್ರೆಕ್ಷದಲ್ಲಿ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ನಾವು ಈಗ ಗಮನಿಸಬಹುದು.     

Friday, 4 November 2011

ಅನುದಿನ ಭವಾಬ್ಧಿಯಲ್ಲಿ .. ೨

ಪ್ರಾಣಿಗಳಲ್ಲಿ ಅವುಗಳ ಜೀವಂತಿಕೆಯ ಮುಖ್ಯ ಗುನಲಕ್ಷನವೆನ್ದರೆ ಅವುಗಳ ಭಾಷೆ ಎಂದೇ ಹೇಳಬೇಕು.ಎಲ್ಲ ಪ್ರಾಣಿಗಳಿಗೂ ಅವುಗಳದೇ ಆದ ಭಾಷಇದೆ.ಇನ್ನುಳಿದ ಪ್ರಾಣಿಗಳ ಭಾಷೆ ಮನುಷ್ಯನಿಗೆ ಸಂಪೂರ್ಣವಾಗಿ ಅರ್ಥವಾಗಲಾದೇನೋ.ಆದರೆ ಮನುಷ್ಯನಿಗೆ ಅವನದೇ ಆದ ಭಾಷೆಯ ಅಗತ್ಯ ಅನಾದಿ ಕಾಲದಿಂದಲೂ ಇದ್ದಇದೆ.ಆತ ತನ್ನ ಅವಶ್ಯಕತೆಗೆತಕ್ಕಂತೆ ಅದನ್ನು ರೂಪಿಸಿಗೊಲ್ಲುತ್ತಲು ಬಂದಿದ್ದಾನೆ.
ಆದರೆ ಭಾಷೆಯ ಅನುಸಂಧಾನ ಮನುಷ್ಯನಿಗೆ ಮೂಲದಲ್ಲಿ ಅಗತ್ಯವಾಗಿ ಕಂಡಿದ್ದರೂ ನಂತರ ಕಾಲಕ್ರಮೇಣ ಅದು ಅವನ ಆಶೆಯಾಗಿಯು ಮನಗಂಡಿದೆ.ಆದ್ದರಿಂದ ಭಾಷೆ ಮನುಷ್ಯನಿಗೆ ಅಗತ್ಯವಾಗಿ ಕಂಡಾಗ ಅದು ತಳೆಯುವ ರೂಪಕ್ಕೂ ಅದು ಅವನ ಅಶೆಯಾದಾಗ ತಳೆಯುವ ರೂಪಕ್ಕೂ ಒಂದು ಅಂತರ ಇದ್ದಇರುತ್ತದೆ.
ಹಾಗಾದರೆ ಅವನಿಗೆ ಯಾಕೆ ಭಾಷೆಯ ಅಗತ್ಯವೂ ಭಾಷೆಯ ಆಶೆಯಾಗಿ ಬೆಳಯಿತು ಎಂಬುದು ಎಲ್ಲ ಭಾಶಾಶಾಸ್ತ್ರಗಲೂ ಎತ್ತಿಕೊಂಡ ಪ್ರಶ್ನೆಯೇ ಆಗಿದೆ.ಮನುಷ್ಯನಿಗೆ ಭಾಷೆ ಮುಖ್ಯವಾಗಿ ಎರಡು ಕಾರಣಗಳಿಗಾಗಿ ಬೇಕಾಗಿದೆ ಎಂಬುದನ್ನು ನಮ್ಮ ಶಾಸ್ತ್ರಕಾರರು ಈ ಮೊದಲೇ ಗುರುತಿಸಿದ್ದಾರೆ.ಒಂದೆಂದರೆ ಅವನ ಅನುದಿನದ ತೀರ ಸಣ್ಣಸಣ್ಣ ,ವ್ಯವಹಾರಿಕ ,ಅಲ್ಪಕಾಲಿಕ ,ವಿಷಯಗಳ ಸಂವಹನಕ್ಕಾಗಿ.ಇನ್ನೊಂದು ಒಂದು ವಿಷಯವನ್ನು ತರ್ಕಬದ್ಧವಾಗಿ ಸಂವಹನಗೊಳಿಸಲು ಆತ ಭಾಷೆಯನ್ನೂ ಬಳಸಲೇಬೀಕಾಗುತ್ತದೆ ಬಹುಷಃ ಎರಡನೆಯ ಬಗೆಯ ಬಳಕೆಯೇ ಭಾಷೆಯ ಚರಿತ್ರೆಯನ್ನು ರೂಪಿಸುವ ಮುಖ್ಯ ಘಟಕವಾಗಿದೆ.
ಹಾಗಾದರೆ ಭಾಷೆಯಲ್ಲಿ ಕವಿತೆ ಬರೆಯುವ ಕವಿಯ ಹೊಕ್ಕು-ಬಳಕೆಯನ್ನು ಏನೆಂದು ವ್ಯಾಖ್ಯಾನಿಸಬೀಕು ಎನ್ನುವದು ಕಾವ್ಯ 
ಮಿಮಾಂಸಕರನ್ನು ಸಾಕಷ್ಟು ಕಾದಿದ್ದೂ ಇದೆ.
ಈ ಅರ್ಥದಲ್ಲಿ ನಾವೀಗ ಒಬ್ಬ ಮನುಷ್ಯನಿಗೆ ತನ್ನ ಭಾಷೆಯನ್ನೂ ಕಾವ್ಯಭಾಷೆಯನ್ನಾಗಿ ಪರಿವರ್ತಿಸಿಗೊಳಲೆಬೇಕಾದ ಅವಶ್ಯಕತೆ 
ಯಾಕೆ ಬರುತ್ತದೆ ಎಂಬುದನ್ನು ಕುರಿತು ಆಲೋಚನೆಗಳನ್ನು ಮುಂದುವರೆಸಬಹುದು.

Thursday, 3 November 2011

ಅನುದಿನ ಭವಾಬ್ಧಿಯಲ್ಲಿ ....೧


ಇಂದಿನಿಂದ ಒಳಗೆ ದುಮಡಿಹಾಕುವ ವಿಚಾರಗಳನ್ನು ಹೊರಗೆ ಆಟಕ್ಕೆ ಕಳಿಸುವ ಕೆಲಸ ಶುರುಮಾಡಿದ್ದೇನೆ.
ಮನುಷ್ಯನೊಬ್ಬನನ್ನು ಬಿಟ್ಟರೆ ಈ ಜಗತ್ತಿನಲ್ಲಿ ಕವಿತೆಗಳನ್ನು ಬರೆಯುವ ಇನ್ನೊಂದು ಪ್ರಾಣಿ ಇದ್ದಂತಿಲ್ಲ.ಮನುಷ್ಯನಿಗೆ ಕವಿತೆ ಬರೆಯಬೇಕೆಂದು ಅನ್ನಿಸುವದಾದರೂ ಯಾಕೆ ಎಂಬ ಪ್ರಶ್ನೆಯನ್ನೂ ನಮ್ಮ ತತ್ವಜ್ಞಾನಿಗಳು ಕಾವ್ಯ-ಮಿಮಾಂಸಕರು ಅನೇಕ ಬಗೆಯಲ್ಲಿ ಕೇಳಿಕೊಂಡಿದ್ದಾರೆ.ತಮ್ಮದೇ ಆದ ಉತ್ತರವನ್ನೂ ಕಂಡುಕೊಂಡಿದ್ದಾರೆ.ಈ ಪ್ರಶ್ನೆಗಳು ಹಾಗು ಉತ್ತರಗಳು ಕಾಲಕಾಲಕ್ಕೆ ಮತ್ತೆ ಮತ್ತೆ ಹೊಸದಾಗಿ ರುಪುಗೊಳುತ್ತವೆನ್ದುಕಾನುತ್ತದೆ.
ಈ ಅರ್ಥದಲ್ಲಿ ಇಂದಿನ ನಮ್ಮ ಕಾಲದ ಈ ಬಗೆಯ ಪ್ರಶ್ನೆಗಳನ್ನು ನಾವೀಗ ಕೇಳಿಕೊಳ್ಳಬೇಕಾಗಿದೆ.ಕವಿತೆ ಇಂದು ಯಾರಿಗೂ ಬೇಕಾಗಿಲ್ಲ ಎನ್ನುವದಕ್ಕಿಂತ ಕವಿತೆ ಪರಂಪರಾಗತವಾಗಿ ಮಾಡುತ್ತಿದ್ದ ,ಕೊಡುತ್ತಿದ್ದ ಫಲಗಳನ್ನು ಇಂದು ಕೊಡುತ್ತಿಲ್ಲ.ಇದು ಯಾರ ತಪ್ಪು ಎಂದು ಹುಡುಕುತ್ತ ಹೋಗಿ ನಮ್ಮ-ನಮ್ಮೊಳಗೇ ಕೆಸರಾಟ ಆಡುವದಕ್ಕಿಂತ ಪ್ರತಿಯೊಬ್ಬ ಕವಿಯೂ ತನ್ನೊಳಗೆ ತಾನೇ ಈ ಬಗೆಯ ಒಂದು ಒಳ-ಹುಡುಕಾಟವನ್ನು ಮಾಡಿಕೊಳ್ಳುವದು ಇಂದಿನ ಕಾವ್ಯ-ಸಂಸ್ಕ್ರತಿಯ ತುರ್ತಿನ ಕಾರ್ಯಾಚಾರನೆಯಾಗಬೇಕಿದೆ  ಹಾಗಾದರೆ ಆ ಚಿಂತನ ಕಾರ್ಯದ ನನ್ನ ವೈಯಕ್ತಿಕ ನೆಲೆಯ ಸ್ವರೂಪವೇನು ಎನ್ನುವದನ್ನು ನಾನೇ ಗುರುತಿಸಿಕೊಳ್ಳಬೇಕು ಹಾಗು ಅದು ನನ್ನ ಕಾವ್ಯದ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆ ನಾನು ನೋಡಿಕೊಳ್ಳಬೇಕು.
ಈ ಆಲೋಚನೆಯನ್ನು ಮತ್ತೆ ಮುಂದುವರೆಸುವ ಆಶೆ ಒಳಗೆ ತೀವ್ರವಾಗಿ ಕಾಡುತ್ತಿದೆ.

ಮ ದು ವೆ

ಮದುವೆ ಎನ್ನುವ ಒಂದು ಆಚರಣೆಯ ಮೂಲಕ ಅಸ್ತಿತ್ವಕ್ಕೆ ಬಂದ ವಿವಾಹವೆಂಬ ಸಂಸ್ಥೆಯ ಬಗೆಗೆ ಒಬ್ಬ ಆಂಗ್ಲ ಲೇಖಕಿ ಬರೆದ ಒಂದು ಸುಂದರವಾದ ಪುಸ್ತಕವನ್ನು ನಾನಿಂದು ಓದಿದೆ.;'ಪ್ಯಾರಲಲ್-ಲೈವ್ಸ' ಎನ್ನುವದು ಆ ಪುಸ್ತಕದ ತಲೆಬರಹ.ಯೂರೊಪಿನ ಐದು ಜನ ಪ್ರತಿಭಾವಂತ ಲೇಖಕ ದಂಪತಿಗಳ ದಾಂಪತ್ಯದ ಕಥೆ ಅಲ್ಲಿದೆ 
ಮುಖ್ಯವಾಗಿ ದಾಂಪತ್ಯ ವೆಂಬ ವ್ಯವಸ್ಥೆಯ ಸಮಸ್ಯೆಗಳು ಹುಟ್ಟುವದುಯೇಲ್ಲಿಂದ ಎಂಬುದನ್ನು ಬಹಳ ಅದ್ಭುತವಾಗಿ ಈ ಲೇಖಕಿ ಬಿಡಿಸಿ ಇಟ್ಟಿದ್ದಾಳೆ.ಅದನ್ನು ಸಾಧ್ಯವಾದರೆ ಅನುವಾದಿಸಿ ಕನ್ನಡಿಗರಿಗೆ ಕೊಡಬೇಕು ಎನ್ನಿಸಿದೆ.

ಸುಮ್ಮನೆ ಕೆಲವು ಮಾತು

ನನ್ನ ಒಳಗಿನ ಅತ್ಯಂತ ಖಾಸಗಿಯಾದ ಮಾತುಗಳನ್ನು ನಾನು ನನಗೆ ಹೇಳಿಕೊಳ್ಳುವ ಅವಶ್ಯಕತೆ ಯಾವ ಕಲಾವಿದನಗೂ ಇದ್ದೆಇರುತ್ತದೆ.ಈ ಅರ್ಥದಲ್ಲಿ ಈ ಬಗೆಯ ಬರಹವು ತುಂಬಾ ಸಶಕ್ತವಾದುದು ಎನಿಸುತ್ತದೆ.ನಾನು ಇಂದಿನಿಂದ ಈ ಭಾಷೆಯ ಕುಟುಂಬದ ಸದಸ್ಯನಾಗಿದ್ದೇನೆ.ನಾನಿದನ್ನು ಸಮರ್ಥವಾಗಿ ಬಳಸಿಕೊಲ್ಲುವೇನೆ? ಎಂಬುದನ್ನು ಕಾಲವೇ ಹೇಳಬೇಕು.
ಮುಂದಿನ ಜೂನ ೨೫ಕ್ಕೆ ಅರವತ್ತು ತಲುಪುವ ನಾನು ಈ ಬರಹದ ಮೂಲಕ ನನ್ನನ್ನು ನಾನೇ ಶೋಧಿಸಿಕೊಳಬಹುದೇನೂ.
ಆ ಕೆಲಸವನ್ನೇ ನಾನು ಈ ಬರಹದ ಮೂಲಕ ಮಾಡಬೇಕು.
ಆದರೆ ಅದು ಆತ್ಮರತಿಯಲ್ಲಿ ಮುಳುಗಿದ ಅಹಂಕಾರವೂ ಆಗಬಾರದು,ಅತಿಯಾದ ಅತ್ಮಮರುಕದ ಅಳದಿಕ್ಕಿ ಗೋಳಾತವೂ ಆಗಬಾರದು.ನೋಡೋಣ ನಾಳಿನಿಂದ ಏನಾದರು ತೋಡಿಕೊಳ್ಳೋಣ